ಕರ್ನಾಟಕಮೈಸೂರು

ಈ ಬಾರಿಯು ಸಾಂಪ್ರಾದಯಿಕ ದಸರಾ ಆಚರಣೆ : ಸಚಿವ ಡಾ.ಹೆಚ್.ಸಿ.ಮಹದೇವಪ್ಪ

ಮೈಸೂರು, ಜುಲೈ 4 : ವಿಶ್ವವಿಖ್ಯಾತ ದಸರಾ ಕಾರ್ಯಕ್ರಮವನ್ನು ಈ ಬಾರಿಯು ಸಾಂಪ್ರಾದಾಯಿಕವಾಗಿ ಆಚರಿಸಲಾಗುವುದು. ಈ ಬಗ್ಗೆ ಉನ್ನತ ಸಮಿತಿ ಸಭೆ ನಡೆಸಲಾಗುವುದು ಎಂದು ಲೋಕೋಪಯೋಗಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರು ತಿಳಿಸಿದರು.

ಇಂದು ಸರ್ಕಾರಿ ಅತಿಥಿ ಗೃಹದಲ್ಲಿ ದಸರಾ ಆಚರಣೆಯ ಬಗ್ಗೆ ಪೂರ್ವಭಾವಿ ಸಿದ್ಧತಾ ಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವ ಮಹದೇವಪ್ಪ ಅವರು, “ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ದಸರಾ ಆಚರಣೆ ಬಗ್ಗೆ ಬೆಂಗಳೂರಿನಲ್ಲಿ ಜುಲೈ 2 ನೇ ವಾರದಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಗುವುದು. ಈ ಸಭೆಯಲ್ಲಿ ದಸರಾ ಆಚರಣೆಯ ಬಗ್ಗೆ ರೂಪರೇಷೆಗಳನ್ನು ಸಿದ್ಧಪಡಿಸಲಾಗುವುದು” ಎಂದರು.

ಉನ್ನತ ಮಟ್ಟದ ಸಭೆಗೆ ದಸರಾ ಆಚರಣೆಗೆ ಸಂಬಂಧಿಸಿದಂತೆ ಹೊಸ ಕಾರ್ಯಕ್ರಮಗಳನ್ನು ನಡೆಸಬೇಕಿದ್ದರೆ ಅಥವಾ ಯಾವುದಾದರೂ ಬದಲಾವಣೆ ಅಥವಾ ಕಾರ್ಯಕ್ರಮವನ್ನು ಉನ್ನತೀಕರಿಸಬೇಕಿದ್ದರೆ ಅವುಗಳ ಬಗ್ಗೆ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ಮಾಹಿತಿ ನೀಡುವಂತೆ ತಿಳಿಸಿದರು.

ಮೈಸೂರು ದಸರಾಗೆ ತನ್ನದೇ ಆದ ಇತಿಹಾಸವಿದೆ. ಪ್ರತಿ ವರ್ಷ ದಸರೆಗೆ ಸಂಬಂಧಿಸಿದಂತೆ ಹೊಸ ಲಾಂಛನವನ್ನು ಬಿಡುಗಡೆ ಮಾಡುವ ಬದಲು ಶಾಶ್ವತವಾಗಿ ಒಂದು ಲಾಂಛನವನ್ನು ಸಿದ್ಧಪಡಿಸಿಕೊಂಡು ದಸರೆ ಸಂದರ್ಭದಲ್ಲಿ ಬಳಸುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕಳೆದ ಬಾರಿ ಪ್ಯಾಲೇಸ್ ಆನ್ ವೀಲ್ಸ್ ಎಂಬ ಹೊಸ ಕಾರ್ಯಕ್ರಮವನ್ನು ದಸರಾದಲ್ಲಿ ಆಯೋಜಿಸಲಾಗಿತ್ತು. ಇದಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದೇ ರೀತಿ ಹೊಸ ವಿನೂತನ ಚಿಂತನೆಗಳನ್ನು ನಡೆಸಬೇಕಿದೆ ಎಂದರು.

ಲೋಕೋಪಯೋಗಿ ಇಲಾಖೆ, ಮೈಸೂರು ಮಹಾನಗರಪಾಲಿಕೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಗಳಿಗೆ ರಸ್ತೆ ದುರಸ್ತಿಗೆ ಸಂಬಂಧಿಸಿದಂತೆ ಅನುದಾನ ಬಿಡುಗಡೆ ಮಾಡಲಾಗುವುದು. ದಸರಾ ಸಮಯದಲ್ಲಿ ಕಾಮಗಾರಿಗಳನ್ನು ಪ್ರಾರಂಭಿಸುವ ಬದಲು ಈಗಾಗಲೇ ದಸರಾಗೆ ಸಂಬಂಧಿಸಿದ ಕಾಮಗಾರಿಗಳಿದ್ದಲ್ಲಿ ಪ್ರಾರಂಭಿಸಿ ಪೂರ್ಣಗೊಳಿಸುವಂತೆ ತಿಳಿಸಿದರು.

ಜಿಲ್ಲಾಧಿಕಾರಿ ರಂದೀಪ್ ಡಿ. ಅವರು ಮಾತನಾಡಿ, ದಸರಾ ಮೆರವಣಿಗೆಯಲ್ಲಿ ಆಯ್ದ 5 ರಾಜ್ಯಗಳ ಸ್ಥಬ್ದ ಚಿತ್ರ ಹಾಗೂ ಒಂದು ಅಂತರರಾಷ್ಟ್ರೀಯ ಸ್ಥಬ್ದಚಿತ್ರಕ್ಕೆ ಅನುಮತಿ, ರಾಷ್ಟ್ರೀಯ ಮಟ್ಟದಲ್ಲಿ ದಸರಾ ಕ್ರೀಡೆ ಆಯೋಜನೆ, ಗಜಪಯಣ ಹಾಗೂ ಓಪನ್ ಸ್ಟ್ರೀಟ್ ಫೆಸ್ಟಿವಲ್ ಆಚರಣೆಯ ಹಾಗೂ ಈ ಸಭೆಯಲ್ಲಿ ಚರ್ಚಿತವಾದ ವಿಷಯವನ್ನು ಉನ್ನತ ಸಮಿತಿ ಸಭೆಗೆ ಸಲ್ಲಿಸಲಾಗುವುದು ಎಂದರು.

ವಸ್ತುಪ್ರದರ್ಶನ ಆವರಣದಲ್ಲಿ ಕಳೆದ ಬಾರಿ ಇಲಾಖಾ ವತಿಯಿಂದ ತೆರೆಯಲಾಗುವ ಮಳಿಗೆಯನ್ನು ಉದ್ಘಾಟನೆಯ ಸಂದರ್ಭದಲ್ಲಿ ತೆರೆಯಲಾಗಿತ್ತು ಆದರೆ ಜಿಲ್ಲಾವಾರು ತೆರೆಯಲಾಗುವ ಮಳಿಗೆಗಳನ್ನು ತೆರೆದಿರಲಿಲ್ಲ ಈ ಬಗ್ಗೆ ಕೂಡ ಉನ್ನತ ಮಟ್ಟದ ಸಭೆಗೆ ಮಾಹಿತಿ ನೀಡಲಾಗುವುದು ಎಂದರು.

ಅಭಿನಂದನೆ :

ಜೂನ್ 5 ರಂದು ಮೈಸೂರು ಜಿಲ್ಲೆಯಲ್ಲಿ ನಡೆದ “ಕೊಟ್ಟ ಮಾತು- ದಿಟ್ಟ ಸಾಧನೆ” ಸೌಲಭ್ಯ ವಿತರಣಾ ಸಮಾವೇಶ ಹಾಗೂ ವಿಭಾಗ ಮಟ್ಟದ ಮಾಹಿತಿ ಉತ್ಸವವನ್ನು ಅಚ್ಚುಕಟ್ಟಾಗಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸಾಕಾಷ್ಟು ಜನರಿಗೆ ಮಾಹಿತಿ ನೀಡಲಾಯಿತು. ಕಾರ್ಯಕ್ರಮ ಆಯೋಜನೆ ಮಾಡಿದ ಜಿಲ್ಲಾಡಳಿತಕ್ಕೆ ಲೋಕೋಪಯೋಗಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ ಅವರು ಅಭಿನಂದನೆ ಸಲ್ಲಿಸಿದರು.

ಸಭೆಯಲ್ಲಿ ಶಾಸಕ ಕಳಲೆ ಎನ್.ಕೇಶವಮೂರ್ತಿ, ಅಪರ ಜಿಲ್ಲಾಧಿಕಾರಿ ಟಿ. ವೆಂಕಟೇಶ್, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಜಗದೀಶ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮಹೇಶ್, ಮೈಸೂರು ನಗರ ಉಪ ಪೊಲೀಸ್ ಆಯುಕ್ತ ಶೇಖರ್, ಹಾಗೂ ಹಲವು ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡರು.

-ಎನ್.ಬಿ.

Leave a Reply

comments

Related Articles

error: