ಕರ್ನಾಟಕ

ಶಿಕ್ಷಕ ವೃತ್ತಿಯಿಂದ ನಿವೃತ್ತನಾದರೂ ಸೇವೆಯಿಂದ ನಿವೃತ್ತನಾಗುವುದಿಲ್ಲ: ಡಿ.ಎಸ್.ಚಂಗಪ್ಪ

ಸೋಮವಾರಪೇಟೆ, ಜು.4: ಶಿಕ್ಷಕ ವೃತ್ತಿಯಿಂದ ನಿವೃತ್ತನಾದರೂ ಸೇವೆಯಿಂದ ನಿವೃತ್ತನಾಗುವುದಿಲ್ಲ ಎಂದು ಐಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಎಸ್.ಚಂಗಪ್ಪ ಹೇಳಿದರು.

ಕಳೆದ 34 ವರ್ಷಗಳಿಂದ ಐಗೂರಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಎಚ್.ಬಿ.ರಾಜಪ್ಪ ಅವರಿಗೆ ಏರ್ಪಡಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು. ಮಕ್ಕಳು ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಲು ದೈಹಿಕ ಶಿಕ್ಷಣ ಶಿಕ್ಷಕರ ಶ್ರಮ ಅಪಾರವಾದುದು. ಕಳೆದ 34 ವರ್ಷಗಳಿಂದ ನಿರಂತರವಾಗಿ ಒಂದೇ ಶಾಲೆಯಲ್ಲಿ ಸೇವೆ ಸಲ್ಲಿಸಿದ ರಾಜಪ್ಪನವರ ಸೇವೆ ಶ್ಲಾಘನೀಯ ಎಂದರು.

ಐಗೂರು ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಭಾರ ಪ್ರಾಂಶುಪಾಲ ಎಚ್.ಕೆ.ಉಮೇಶ್ ಮಾತನಾಡಿ, ಶಿಕ್ಷಕ ವೃತ್ತಿ ಶ್ರೇಷ್ಠವಾದುದು. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುವ ಶಿಕ್ಷಕ ಸಮಾಜದಲ್ಲಿ ಎಲ್ಲರಿಗೂ ಮಾದರಿ. ಸರಕಾರದ ಕೆಲಸ ದೇವರ ಕೆಲಸ ಎಂದು ನಂಬಿ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ್ದಲ್ಲಿ ನಿವೃತ್ತಿಯ ನಂತರವೂ ಉತ್ತಮ ಜೀವನವನ್ನು ನಡೆಸಬಹುದಾಗಿದೆ ಎಂದರು. ಶಾಲಾ ಶಿಕ್ಷಕ ವೃಂದ ಮತ್ತು ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿ ಸಿಬ್ಬಂದಿಗಳು ರಾಜಪ್ಪನವರ ಸೇವೆಯನ್ನು ಸ್ಮರಿಸಿ ಸನ್ಮಾನಿಸಿದರು.

ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಸದಸ್ಯೆ ಸಬಿತ ಚನ್ನಕೇಶವ, ಆರ್‍ಎಂಸಿ ಸದಸ್ಯ ಡಿ.ಎಸ್. ಪೊನ್ನಪ್ಪ, ಸಿಆರ್‍ಪಿ ಅಶೋಕ್, ಪ್ರಭಾರ ಮುಖ್ಯಶಿಕ್ಷಕ ಯಶವಂತ್, ನಿವೃತ್ತ ಶಿಕ್ಷಕ ಮೇದಪ್ಪ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು, ಕಾಲೇಜು ಉಪನ್ಯಾಸಕರು ಉಪಸ್ಥಿತರಿದ್ದರು. ಹಿರಿಯ ಶಿಕ್ಷಕರಾದ ಅನಿತಾ ಮತ್ತು, ಸಹಶಿಕ್ಷಕರಾದ ರಾಜರತ್ನ ಕಾರ್ಯಕ್ರಮ ನಿರ್ವಹಿಸಿದರು. (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: