ಕರ್ನಾಟಕ

ಕರಿಮೆಣಸು ದುರುಪಯೋಗ ಆರೋಪ : ಜು.7 ರಂದು ಪ್ರತಿಭಟನೆ

ರಾಜ್ಯ(ಮಡಿಕೇರಿ)ಜು.4:-ಮಾಲ್ದಾರೆ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದಿರುವ ಭಾರೀ ಪ್ರಮಾಣದ ಕರಿಮೆಣಸು ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ಖಂಡಿಸಿ ಜು. 7 ರಂದು ನಗರದ ಸಹಕಾರ ಸಂಘಗಳ ಉಪನಿಬಂಧಕರ ಕಛೇರಿ ಎದುರು ಪ್ರತಿಭಟನೆ ನಡೆಸಲು ಕಾವೇರಿಸೇನೆ ನಿರ್ಧರಿಸಿದೆ ಎಂದು ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಕೋಲತಂಡ ರಘು ಮಾಚಯ್ಯ ತಿಳಿಸಿದ್ದಾರೆ.
ಮಾಲ್ದಾರೆ ಕೃಷಿ ಪತ್ತಿನ ಸಹಕಾರ ಸಂಘದ ಕೆಲವು ಸದಸ್ಯರುಗಳೊಂದಿಗೆ ಸುದ್ದಿಗೋಷ್ಠಿ ನಡೆಸಿದ ಅವರು, ನಾಲ್ಕು ತಿಂಗಳ ಹಿಂದೆ ಸಹಕಾರ ಸಂಘದ ಗೋದಾಮಿನಲ್ಲಿರಿಸಿದ್ದ ಕರಿಮೆಣಸಿನ ದಾಸ್ತಾನಿನ ಪೈಕಿ 100 ಚೀಲ ಕರಿಮೆಣಸು ದುರುಪಯೋಗವಾಗಿದೆ ಎಂದು ಆರೋಪಿಸಿದರು. ಈ ಬಗ್ಗೆ ಕಳೆದ ಏ.3 ರಂದು ಸಹಕಾರ ಸಂಘಗಳ ಉಪನಿಬಂಧಕರಿಗೆ ಲಿಖಿತ ದೂರನ್ನು ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಒಂದು ತಿಂಗಳ ಒಳಗಾಗಿ ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ, ಮೂರು ತಿಂಗಳು ಕಳೆದರು ಈ ಬಗ್ಗೆ ಯಾವುದೇ ತನಿಖೆ ನಡೆದಿಲ್ಲವೆಂದು ಅವರು ಬೇಸರ ವ್ಯಕ್ತಪಡಿಸಿದರು.
ಕರಿಮೆಣಸಿನ ದುರುಪಯೋಗಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳದೆ ಜಾಣ ಮೌನವನ್ನು ಪ್ರದರ್ಶಿಸುತ್ತಿರುವ ಸಹಕಾರ ಸಂಘಗಳ ಉಪನಿಬಂಧಕರ ಕಛೇರಿಯ ಧೋರಣೆ ಗಮನಿಸಿದಾಗ, ಪ್ರಕರಣದಲ್ಲಿ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ ಎಂದು ರಘು ಮಾಚಯ್ಯ ಆರೋಪಿಸಿದರು. ಪ್ರಕರಣದ ತನಿಖೆಗೆ ಆಗ್ರಹಿಸಿ ನಡೆಸುವ ಮುಷ್ಕರಕ್ಕೆ ಸೂಕ್ತ ಸ್ಪಂದನೆ ದೊರಕದಿದ್ದಲ್ಲಿ ಸಹಕಾರ ಸಂಘಗಳ ಉಪನಿಬಂಧಕರ ವಿರುದ್ಧವೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಹಕಾರ ಸಂಘದ ಸದಸ್ಯರಾದ ವಿ.ಕೆ. ಗಣಪತಿ, ಎಂಎಸ್. ಗಣೇಶ್, ರಾಘವ ಹಾಗೂ ಫ್ರಾನ್ಸಿಸ್ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: