ಮೈಸೂರು

ಪ್ರವಾಸದಿಂದ ದೊರಕುವ ಜ್ಞಾನದಿಂದ ಶಿಕ್ಷಣ ಪೂರ್ಣ : ಪ್ರೊ.ಕೆ.ಎಸ್.ಭಗವಾನ್

ಪಠ್ಯದಿಂದ ಕಲಿಯುವ ವಿದ್ಯೆಗೂ ಪ್ರವಾಸದಿಂದ ಕಲಿಯುವ ವಿದ್ಯೆಗೂ ವ್ಯತ್ಯಾಸವಿದೆ. ಪ್ರವಾಸದಿಂದ ದೊರಕುವ ಜ್ಞಾನ ಶಿಕ್ಷಣವನ್ನು ಪೂರ್ಣಗೊಳಿಸುತ್ತದೆ ಎಂದು ಸಾಹಿತಿ ಪ್ರೊ.ಎಸ್.ಭಗವಾನ್ ಹೇಳಿದರು.

ಮೈಸೂರಿನ ಖಾಸಗಿ ಹೋಟೆಲೊಂದರಲ್ಲಿ ಗುರುವಾರ ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ಹಮ್ಮಿಕೊಂಡಿದ್ದ ದಸರಾ ಕವಿಗೋಷ್ಠಿ ಮತ್ತು ಉತ್ತರ ಭಾರತ ಯಾತ್ರಾರ್ಥಿಗಳಿಗೆ ಹಾರೈಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಉತ್ತರಭಾರತ ಪ್ರವಾಸ ಕೈಗೊಂಡಿರುವವರಿಗೆ ಶುಭ ಕೋರಿದ ಅವರು ಪ್ರವಾಸಿಗರು ಧಾರ್ಮಿಕ ಸ್ಥಳಗಳನ್ನು ನೋಡುವುದಕ್ಕಿಂತ ಪ್ರಕೃತಿ ಸೌಂದರ್ಯವನ್ನು ಸವಿಯಬೇಕು. ಅಲ್ಲಿನ ಭೌಗೋಳಿಕ ಲಕ್ಷಣ, ಜನಜೀವನ ಕಡೆ ಗಮನ ಹರಿಸಬೇಕು. ಶಿಲ್ಪಕಲೆಗಳು ನಮ್ಮ ನಾಡಿನ ಕಲಾ ಶ್ರೀಮಂತಿಕೆಯನ್ನು ಬಿಂಬಿಸುತ್ತವೆ. ನಮ್ಮಲ್ಲಿನ ಕಲಾ ಸೌಂದರ್ಯವನ್ನು ಸವಿಯಬೇಕು ಎಂದರು.

ಯಾವುದೇ ಬಗೆಯ ತಾರತಮ್ಯ ತೋರದೆ ಎಲ್ಲರೂ ಒಂದೇ ಎಂಬ ಉದಾತ್ತ ತತ್ವ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಉದಾತ್ತ ಎಂದರೆ ಬೆಳಕು. ನಾವೆಲ್ಲರೂ ಒಂದು ಎಂದಾಗ ಬೆಳಕಾಗುತ್ತದೆ ಎಂದು ತಿಳಿಸಿದರು.

ಹೋಟೆಲ್ ಮಾಲಿಕರ ಸಂಘದ ಅಧ್ಯಕ್ಷ ಸಿ.ನಾರಾಯಣ ಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿ, ಉತ್ತರಭಾರತ ಯಾತ್ರಾರ್ಥಿಗಳಿಗೆ ಶುಭ ಹಾರೈಸಿದರು.

ವೈ.ಎಸ್.ಅಭಿಷೇಕ್, ಆರನೇ ತರಗತಿ ವಿದ್ಯಾರ್ಥಿನಿ ಎಸ್.ಧನ್ಯ, ಪ್ರೊ.ಮೃತ್ಯುಂಜಯ, ಮಂಜುನಾಥ ಪಾಂಡವಪುರ, ನಾಗವೇಣಿ, ಎ.ಸಿ.ಸುಬ್ಬುಲಕ್ಷ್ಮಿ ಕವನ ವಾಚಿಸಿದರು.

ವೇದಿಕೆಯಲ್ಲಿ ಸಾಹಿತಿ ಡಾ.ಎಸ್.ಪಿ.ಯೋಗಣ್ಣ, ಟಿ.ಸತೀಶ್ ಜವರೇಗೌಡ, ಕರ್ನಾಟಕ ಕಾವಲು ಪಡೆ ಅಧ್ಯಕ್ಷ ಮೋಹನ್ ಕುಮಾರ್ ಗೌಡ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: