ಮೈಸೂರು

ದಸರಾ ಉತ್ಸವದಲ್ಲಿ ಕಾರ್ಯಕ್ರಮ ನೀಡಲು ಬಂದವರ ಹಣ ಎಗರಿಸಿದ ಕಳ್ಳರು: ತಡವಾಗಿ ಬೆಳಕಿಗೆ ಬಂದ ಕೃತ್ಯ

ಎಷ್ಟೇ ಮುಂಜಾಗ್ರತೆ ವಹಿಸಿದರೂ, ಎಷ್ಟೇ ಭದ್ರತೆ ಒದಗಿಸಿದರೂ ಕಳ್ಳರು ಯಾವ ರೀತಿ ಚಮತ್ಕಾರ ನಡೆಸುತ್ತಾರೋ ಗೊತ್ತಿಲ್ಲ. ದಸರಾ ಉತ್ಸವದ ಜಂಬೂ ಸವಾರಿಯ ದಿನ ಬನ್ನಿಮಂಟಪದ ಕವಾಯತು ಮೈದಾನದಲ್ಲಿ ಮಲ್ಲಕಂಬ ಪ್ರದರ್ಶನ ನೀಡಿ ಪ್ರೇಕ್ಷಕರನ್ನು ಆಕರ್ಷಿಸಿದ್ದ ಮಕ್ಕಳು ವಾಸ್ತವ್ಯ ಹೂಡಿದ್ದ ಕೊಠಡಿಯಲ್ಲಿ ಕಳ್ಳರು ತಮ್ಮ ಕರಾಮತ್ತನ್ನು ತೋರಿಸಿದ್ದು, 11,600ರೂ.ನಗದು ಹಾಗೂ 27,500ರೂ.ಮೌಲ್ಯದ ಮೊಬೈಲ್ ಗಳನ್ನು ಎಗರಿಸಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಬನ್ನಿಮಂಟಪದ ಕವಾಯತು ಮೈದಾನದಲ್ಲಿ ಮಲ್ಲಕಂಬ ಪ್ರದರ್ಶನ ನೀಡಲು ಎಲ್ಲರೂ ತಮ್ಮ ಕೊಠಡಿಯಿಂದ ತೆರಳಿದ ವೇಳೆ ಕಳ್ಳತನ ಕೃತ್ಯ ನಡೆದಿದೆ ಎನ್ನಲಾಗಿದೆ. ಪ್ರದರ್ಶನ ನೀಡಿ ವಾಪಸ್ಸಾದ ಸಮಯದಲ್ಲಿ ಅವರ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಎಲ್ಲರೂ ತಮ್ಮ ಬ್ಯಾಗುಗಳನ್ನು ಪರಿಶೀಲಿಸಲಾಗಿ ಮೂವರು ಮಕ್ಕಳು ತಮ್ಮ ಬ್ಯಾಗಿನಲ್ಲಿರಿಸಿದ್ದ ನಗದು ಹಣ ಹಾಗೂ ವಿವಿಧ ಕಂಪನಿಯ ಮೊಬೈಲ್ ಕಳ್ಳತನವಾಗಿರುವುದು ತಿಳಿದುಬಂದಿದೆ.

ಕಳ್ಳತನ ಕೃತ್ಯದ ಅರಿವಾಗುತ್ತಲೇ ಆ ಮೂವರು ಮಕ್ಕಳು ದೇವರಾಜ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಾಡಹಬ್ಬ ದಸರಾ ಸುಲಲಿತವಾಗಿ ನಡೆದಿದೆ. ಎಲ್ಲಿಯೂ ಏನೂ ಅಹಿತಕರ ಘಟನೆಗಳು ಆಗಿಲ್ಲ ಎಂದುಕೊಳ್ಳುತ್ತಿರುವಾಗಲೇ ಕಳ್ಳತನ ಕೃತ್ಯ ಬೆಳಕಿಗೆ ಬಂದಿದ್ದು ಜಿಲ್ಲಾಡಳಿತಕ್ಕೆ ನೋವುಂಟು ಮಾಡಿದೆ.

Leave a Reply

comments

Related Articles

error: