ದೇಶಪ್ರಮುಖ ಸುದ್ದಿವಿದೇಶ

ಎಂತಹುದೇ ದಾಳಿ ತಡೆಯಬಲ್ಲ ವಿಶ್ವದ ಅತ್ಯಂತ ಸುರಕ್ಷಿತ ಹೋಟೆಲ್‍ನಲ್ಲಿ ಮೋದಿ ವಾಸ್ತವ್ಯ

ಜೆರುಸಲೇಂ, ಜುಲೈ 5 : ಇಸ್ರೇಲ್ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗಾಗಿ ವಿಶ್ವದ ಅತ್ಯಂತ ಸುರಕ್ಷಿತ ಸ್ಥಳವೆಂದೇ ಹೇಳಲಾಗುವ ಹೋಟೆಲ್‍ನಲ್‍ನಲ್ಲಿ ಇಸ್ರೇಲ್ ಸರ್ಕಾರ ವ್ಯವಸ್ಥೆ ಮಾಡಿದೆ. ಇಡೀ ಜಗತ್ತಿನಲ್ಲಿ ಹೆಚ್ಚು ಭದ್ರತೆಯ ಸ್ಥಳ ಇದಾಗಿದ್ದು, ಬಾಂಬ್, ಕ್ಷಿಪಣಿ ಅಥವಾ ರಾಸಾಯನಿಕ ದಾಳಿಯನ್ನು ಸಮರ್ಥವಾಗಿ ತಡೆಯಬಲ್ಲ ವ್ಯವಸ್ಥೆ ಈ ಹೋಟೆಲ್‍ನಲ್ಲಿದೆ. ಈ ಹೋಟೆಲ್ ಹೆಸರು ಕಿಂಗ್ ಡೇವಿಡ್.

ಹೋಟೆಲ್ ಮೇಲೆ ಬಾಂಬ್ ಅಥವಾ ಕ್ಷಿಪಣಿ ದಾಳಿ ಮಾಡಿದರೂ ಭಾರತದ ಪ್ರಧಾನಿ ಮೋದಿ ಅವರು ಉಳಿದುಕೊಂಡಿರುವ ಸೂಟ್ ಸ್ವಲ್ಪವೂ ಕಂಪಿಸುವುದಿಲ್ಲ ಎಂದು ಹೋಟೆಲ್‍ನ ನಿರ್ವಾಹಕ ನಿರ್ದೇಶಕ ಶೆಲ್ಡನ್ ರಿಟ್ಜ್ ಅವರು ಹೇಳಿದ್ದಾರೆ. ಭಾರತದ ಪ್ರಧಾನಿ ಮೋದಿ ಮತ್ತು ಅವರ ನಿಯೋಗ ವಾಸ್ತವ್ಯ ಹೂಡಲು ಈ ಹೊಟೆಲ್‍ನಲ್ಲಿಯೇ 110 ವಿಶೇಷ ಕೊಠಡಿಗಳನ್ನು ಸಜ್ಜುಗೊಳಿಸಲಾಗಿದೆ.

ಅಮೆರಿಕದ ಮಾಜಿ ಅಧ್ಯಕ್ಷರಾದ ಬಿಲ್ ಕ್ಲಿಂಟನ್, ಜಾರ್ಜ್ ಡಬ್ಲ್ಯು ಬುಷ್, ಬರಾಕ್ ಒಬಾಮಾ ಮತ್ತು ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಂತಹ ಗಣ್ಯಾತಿಗಣ್ಯರಿಗೆ ಮಾತ್ರ ಈ ಹೋಟೆಲ್‍ನಲ್ಲಿ ತಂಗಲು ಅವಕಾಶ ನೀಡಲಾಗುತ್ತದೆ. ಇದೀಗ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಯ ಬಗ್ಗೆಯೂ ವಿಶೇಷ ಕಾಳಜಿ ವಹಿಸಿರುವ ಇಸ್ರೇಲ್ ಸರ್ಕಾರ ಮೋದಿಯವರಿಗೂ ಈ ಹೋಟೆಲ್‍ನಲ್ಲೇ ವಾಸ್ತವ್ಯದ ವ್ಯವಸ್ಥೆ ಮಾಡಿದೆ.

ಮೋದಿಯವರ ಅವರ ಆಹಾರದ ಬಗ್ಗೆಯೂ ಕಾಳಜಿ ವಹಿಸಲಾಗಿದೆ. ಕುಕ್ಕೀಸ್‍ನಲ್ಲಿಯೂ ಮೊಟ್ಟೆ, ಸಕ್ಕರೆ ಮಿಶ್ರಣ ಮಾಡಿಲ್ಲ. ಮೋದಿ ಅವರ ಸೂಟ್‍ನಲ್ಲಿ ವಿಶೇಷ ಅಡುಗೆ ಮನೆ ಇದೆ. ಅಲ್ಲಿ ಅವರಿಗೆ ಇಷ್ಟವಾದ ಗುಜರಾತಿ ಆಹಾರ ಸೇವಿಸಬಹುದು. ಭಾರತೀಯ ಅಡುಗೆಗೆ ಬೇಕಾದ ಎಲ್ಲ ಆಹಾರ ಪದಾರ್ಥಗಳು ಸಿದ್ಧವಾಗಿವೆ. ಖ್ಯಾತ ಬಾಣಸಿಗರಾದ ರೀನಾ ಪುಷ್ಕರಣ್ ಅವರು ಅಡುಗೆ ತಯಾರಿಸಲಿದ್ದಾರೆ. ಮೋದಿಯವರಿಗೆ ನೀಡಲಿರುವ ಹೂಗುಚ್ಛದ ಬಗ್ಗೆಯೂ ನಿಗಾ ವಹಿಸಿದ್ದೇನೆ ಎನ್ನುತ್ತಾರೆ ಹೋಟೆಲ್‍ನ ನಿರ್ವಾಹಕ ನಿರ್ದೇಶಕ ಶೆಲ್ಡನ್.

-ಎನ್.ಬಿ.

Leave a Reply

comments

Related Articles

error: