ಮೈಸೂರು

ಮೈಸೂರು ವಿವಿಯ ಪ್ರೊ.ಬಿ.ಶಿವರಾಜ್ ಅವರಿಗೆ ಕಡ್ಡಾಯ ನಿವೃತ್ತಿಗೆ ಒತ್ತಾಯ

ಮೈಸೂರು.ಜು.5 : ಮೈಸೂರು ವಿವಿಯ ರಾಣಿ ಬಹದ್ದೂರ್ ನಿರ್ವಹಣ ವಿಜ್ಞಾನ (ಬಿಐಎಂಎಸ್) ವಿಭಾಗದ ಹಿರಿಯ ಬೋಧಕ ಪ್ರೊ.ಬಿ.ಶಿವರಾಜ್ ಅವರಿಗೆ ಕಡ್ಡಾಯ ನಿವೃತ್ತಿ ಶಿಕ್ಷೆ ಜಾರಿಯಾದ ನಂತರವೂ ಸರ್ಕಾರ ನೀಡಿರುವ ಮರು ನೇಮಕಾತಿಯನ್ನು ಖಂಡಿಸಿ ಆದೇಶ ಹಿಂಪಡೆಯಬೇಕೆಂದು ಆರ್.ಟಿ.ಐ ಕಾರ್ಯಕರ್ತ ಆರ್.ಎನ್. ಸತ್ಯನಾರಾಯಣ ಆಗ್ರಹಿಸಿದರು.

ಬುಧವಾರ ಪತ್ರಕರ್ತರ ಭವನದಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ಮಾಹಿತಿಯಲ್ಲಿ ಪ್ರೊ.ಬಿ.ಶಿವರಾಜ್ ಅವರು ಕಳೆದ ಹತ್ತಾರು ವರ್ಷಗಳಿಂದ ಏಕಕಾಲದಲ್ಲಿ ಎರಡು ಮೂರು ಕಡೆ ವಿವಿಧ ವಿವಿಗಳಲ್ಲಿ ಪರೀಕ್ಷಾ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕೆಲಸ ನಿರ್ವಹಿಸಿ , ಅದೇ ದಿನಗಳಲ್ಲಿ ತಮ್ಮ ವಿಭಾಗದ ಬಿಐಎಂಎಸ್ ನಲ್ಲೂ ಕೆಲಸ ನಿರ್ವಹಿಸಿರುವುದಾಗಿ ಹಾಜರಾತಿಯಲ್ಲಿ ಸಹಿ ಹಾಕಿ ಮಾಸಿಕ ವೇತನ ಮತ್ತು ಉತ್ತರ ಪತ್ರಿಕೆಗಳ ಮೌಲ್ಯಮಾಪನ ಸಂಭಾವನೆಯನ್ನು ಪಡೆದಿದ್ದು ವಿವಿಗೆ, ಸರ್ಕಾರಕ್ಕೆ ಮತ್ತು ಆದಾಯ ತೆರಿಗೆ ಇಲಾಖೆಗೆ ವಂಚಿಸಿ ಅಪರಾಧವೆಸಗಿರುತ್ತಾರೆ.

ಈ ಪ್ರಕರಣ ಸಂಬಂಧ ಕೂಡಲೇ ಕ್ರಮ ಕೈಗೊಂಡು ಕರ್ನಾಟಕ ಲೋಕಾಯುಕ್ತರಿಗೆ, ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಯವರು ವಿವಿ ಕುಲಪತಿಯವರಿಗೆ ಸೂಚಿಸಿದ್ದರು.

ಅಲ್ಲದೇ ಮೈಸೂರು ವಿವಿಯ ನಕಲಿ ಲಾಂಛನವನ್ನು ಸ್ವಹಿತಸಕ್ತಿಗಾಗಿ ಬಳಸಿ ವಿದೇಶಗಳ ವಿವಿಗಳೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡಿದ್ದರು. ಈ ಬಗ್ಗೆ ದೂರು ನೀಡಲಾಗಿ ಆಪಾದಿತ ಶಿವರಾಜ್ ವಿರುದ್ಧ ಸೂಕ್ತ ಕ್ರಮ ಜರುಗಿಸಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಮೈಸೂರು ವಿವಿ ರಿಜಿಸ್ಟ್ರಾರ್ ಅವರಿಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ತಿಳಿಸಿದ್ದರು.

ಸರ್ಕಾರದ ಕೋರಿಕೆ ಮೇರೆಗೆ ಮೈಸೂರು ವಿವಿಯೂ ಪ್ರೊ.ಶಿವರಾಜ್ ವಿರುದ್ಧ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರಿಂದ ದಾಖಲೆಗಳ ಪರಿಶೀಲನೆ ನಡೆಸಿತ್ತು. ಈ ಸಂಬಂಧ ತನಿಖೆ ನಡೆಸಿದ ನ್ಯಾಯಾಧೀಶರು ವಿವಿಗೆ ವಿವರವಾದ ವರದಿ ಸಲ್ಲಿಸಿದ್ದರು. ನಂತರ ವರದಿಯಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ವಿವಿ ಸಿಂಡಿಕೇಟ್ ವಿಶೇಷ ಸಭೆ ಪ್ರೊ.ಶಿವರಾಜ್ ಅವರಿಗೆ ಕಡ್ಡಾಯ ನಿವೃತ್ತಿ ಶಿಕ್ಷೆ ವಿಧಿಸಲು ನಿರ್ಣಯಿಸಿತು.

ವಿವಿಯಲ್ಲಿ ಮೇಲ್ಕಂಡ ಎರಡು ಗುರುತರ ಪ್ರಕರಣಗಳಲ್ಲಿ ಅಪಾದಿತರೆಂದು ಪ್ರೊ.ಶಿವರಾಜ್ ಸಾಬೀತಾದ ನಂತರವೂ ಅವರನ್ನು ಹುದ್ದೆಯಿಂದ ವಜಾಗೊಳಿಸದೆ ಕಡ್ಡಾಯ ನಿವೃತ್ತಿಗೊಳಿಸಿ ಶಿಕ್ಷೆಯ ಪ್ರಮಾಣವನ್ನು ವಿಶ್ವವಿದ್ಯಾನಿಲಯ ಕಡಿಮೆ ಮಾಡಿ ತಪ್ಪು ಎಸಗಿದೆ ಎಂದು ಸತ್ಯನಾರಾಯಣ ಆರೋಪಿಸಿದರು.

ಈ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಸರ್ಕಾರ ಬೇರೆ ಯಾವುದಾದರೂ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಿದ್ದೇ ಆಗಿದ್ದಲ್ಲಿ ಅದನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.

ಇಲ್ಲದಿದ್ದರೆ ಈ ಕೂಡಲೇ ಪ್ರೊ.ಬಿ.ಶಿವರಾಜ್ ಅವರಿಗೆ ಮರು ನೇಮಕ ಆದೇಶವನ್ನು ಹಿಂಪಡೆಯಬೇಕೆಂದು ಸರ್ಕಾರವನ್ನು ಆಗ್ರಹಿಸಿದರು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: