ದೇಶಪ್ರಮುಖ ಸುದ್ದಿ

ಜಿಎಸ್‍ಟಿ ಜೊತೆ ದುಪ್ಪಟ್ಟು ತೆರಿಗೆಯಿಂದ ಚಿತ್ರರಂಗಕ್ಕೆ ತೊಂದರೆಯಾಗಿದೆ : ರಜನಿಕಾಂತ್

ಚೆನ್ನೈ, ಜುಲೈ 5 : ತಮಿಳುನಾಡಿನಲ್ಲಿ ಚಲನಚಿತ್ರಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ – ಜಿಎಸ್ಟಿ ಮಾತ್ರವಲ್ಲದೆ ಹೆಚ್ಚುವರಿಯಾಗಿ ಶೇಕಡಾ 30ರಷ್ಟು ಸ್ಥಳೀಯಾಡಳಿತ ತೆರಿಗೆ ವಿಧಿಸಿರುವುದರಿಂದ ತಮಿಳು ಚಿತ್ರರಂಗಕ್ಕೆ ಭಾರೀ ತೊಂದರೆಯಾಗಿದೆ ಎಂದು ತಮಿಳು ಸೂಪರ್‍ಸ್ಟಾರ್ ರಜನೀಕಾಂತ್‍ ಹೇಳಿದ್ದಾರೆ.

ಸರ್ಕಾರದ ಈ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸುವ ಚಿತ್ರನಟ ರಜನಿಕಾಂತ್ ಅವರು, ತಮಿಳು ಚಿತ್ರೋದ್ಯಮವನ್ನು ನಂಬಿಕೊಂಡು ಲಕ್ಷಾಂತರ ಜನ ಜೀವನ ಮಾಡುತ್ತಿದ್ದಾರೆ. ತೆರಿಗೆ ಕುರಿತಾದ ನಮ್ಮ ಮನವಿಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.

ಜಿಎಸ್ಟಿ ಜಾರಿಯಾದ ನಂತರ ಚಿತ್ರಮಂದಿರಗಳಲ್ಲಿ 100 ರೂಪಾಯಿ ಒಳಗಿನ ಟಿಕೆಟ್‍ಗಳಿಗೆ ಶೇ.18ರಷ್ಟು ತೆರಿಗೆ ವಿಧಿಸಲಾಗುತ್ತದೆ. 100 ರೂ.ಗಳಿಗಿಂದ ಹೆಚ್ಚಿನ ಬೆಲೆಯ ಮಲ್ಟಿಪ್ಲೆಕ್ಸ್ ಟಿಕೆಟ್‍ಳಿಗೆ ಶೇ.28ರಷ್ಟು ತೆರಿಗೆ ಕಟ್ಟಬೇಕಿದೆ. ಆದರೆ, ಜಿಎಸ್ಟಿ ಜತೆಗೆ ಸ್ಥಳೀಯಾಡಳಿತ ತೆರಿಗೆ ಹೇರಿದರೆ, ಟಿಕೆಟ್ ಮೌಲ್ಯದ ಅರ್ಧದಷ್ಟು ತೆರಿಗೆ ಪಾವತಿಸಬೇಕಾಗುತ್ತದೆ.

ಈ ತೆರಿಗೆಯನ್ನು ವಿರೋಧಿಸಿ ಸೋಮವಾರದಿಂದ ತಮಿಳುನಾಡಿನಾದ್ಯಂತ 1 ಸಾವಿರಕ್ಕೂ ಅಧಿಕ ಸಿನಿಮಾ ಮಂದಿರಗಳ ಬಾಗಿಲು ಮುಚ್ಚಿ ಮುಷ್ಕರ ನಡೆಸಲಾಗುತ್ತಿದೆ. ಸರ್ಕಾರದ ಕ್ರಮ ವಿರೋಧಿಸಿ ಚಲನಚಿತ್ರ ಮಂದಿರಗಳ ಮಾಲೀಕರು ಅನಿರ್ದಿಷ್ಟಾವಧಿವರೆಗೆ ಪ್ರತಿಭಟನೆ ಆರಂಭಿಸಿದ್ದಾರೆ. ಸಿನಿಮಾ ಟಿಕೆಟ್ ಮೇಲಿನ ತೆರಿಗೆ ಶೇಕಡಾ 58 ರಷ್ಟಾಗಿದ್ದು, ಇದು ದೇಶದ ಎಲ್ಲ ರಾಜ್ಯಗಳಿಗಿಂತಲೂ ಅಧಿಕ ತೆರಿಗೆಯಾಗಿದೆ. ಇದರಿಂದ ಟಿಕೆಟ್‍ ಬೆಲೆ ಏರಿಕೆ ಮಾಡುವುದು ಅನಿವಾರ್ಯವಾಗಲಿದ್ದು,  ಸಿನಿಮಾ ವೀಕ್ಷಕರ ಮೇಲೂ ಇದು ಹೊರೆಯಾಗಿ ಪರಿಣಮಿಸಿದೆ. ಪ್ರತಿಭಟನೆಯಿಂದಾಗಿ ನಿತ್ಯ ₹20 ಕೋಟಿ ರೂಪಾಯಿಗಳಷ್ಟ ನಷ್ಟವಾಗಿದೆ ಎಂದು ತಿಳಿದುಬಂದಿದೆ.

ತೆರಿಗೆ ಹೊರೆ ಕಡಿಮೆ ಮಾಡುವಂತೆ ತಮಿಳುನಾಡು ರಾಜ್ಯ ಚಿತ್ರಮಂದಿರ ಮಾಲೀಕರು ಹಾಗೂ ವಿತರಕರ ಸಂಘದ ಅಧ್ಯಕ್ಷ ಅಬಿರಾಮಿ ರಾಮನಾಥನ್ ಅವರು ಮುಖ್ಯಮಂತ್ರಿ ಎಡಪಾಡಿ ಕೆ.ಪಳನಿಸ್ವಾಮಿ ಹಾಗೂ ಹಣಕಾಸು ಸಚಿವ ಡಿ. ಜಯಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

-ಎನ್.ಬಿ.

Leave a Reply

comments

Related Articles

error: