ಮೈಸೂರು

ಜಿಲ್ಲೆಯಲ್ಲಿ ಹರಡುತ್ತಿರುವ ಡೆಂಗ್ಯೂ ಜ್ವರ : ಸೊಳ್ಳೆ ಬ್ಯಾಟ್ ಗಳಿಗೀಗ ಭಾರೀ ಬೇಡಿಕೆ

ಮೈಸೂರು,ಜು.4:-ಕಣ್ಣಿಗೆ ಕಾಣಿಸದ ಅತಿಚಿಕ್ಕ ಕೀಟ. ಕಡಿದರೆ ಮಾತ್ರ ಬರುವುದು ಮಾರಕ ರೋಗ. ಮಲೇರೀಯಾ, ಡೆಂಗ್ಯೂ, ಚಿಕೂನ್ ಗುನ್ಯಾ ಕಾಯಿಲೆಗಳು ಬಂದರೆ ಸುಧಾರಿಸಿಕೊಳ್ಳೋದೇ ಕಷ್ಟ. ಈ ಎಲ್ಲಾ ರೋಗಗಳಿಗೆ ಮೂಲ ಕಾರಣ ಒಂದು ಚಿಕ್ಕ ಸೊಳ್ಳೆ. ಅದನ್ನು ಸರ್ವನಾಶ ಮಾಡಲೆಂದೇ ತಯಾರಿಸಲಾದ ಸೊಳ್ಳೆ ಬ್ಯಾಟ್ ಗೀಗ ಎಲ್ಲಿಲ್ಲದ ಬೇಡಿಕೆ ಬಂದಿದೆ.

ಮುಸ್ಸಂಜೆಯಾಗುತ್ತಲೇ ಸಂಗೀತ ಹಾಡಿಕೊಂಡು ಎಲ್ಲರ ಮನೆಗೆ ಲಗ್ಗೆ ಇಡುವ ಈ ಚಿಕ್ಕ ಸೊಳ್ಳೆಗೆ ಇದೀಗ ಎಲ್ಲರೂ ಭಯಪಡಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತೀಚಿಗೆ ಈ ಸೊಳ್ಳೆ ಕಡಿದು ಕಾಣಿಸಿಕೊಂಡ ಡೆಂಗ್ಯೂ ಜ್ವರದಿಂದ ಮಡಿದವರು ಏಳೆಂಟು ಮಂದಿ. ಅದಕ್ಕಾಗಿ ಮೈಸೂರು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇನ್ನಿಲ್ಲದ ಕಾಳಜಿ ವಹಿಸಿದೆ. ಅದಕ್ಕೆಂದೇ ಕ್ಷಿಪ್ರ ಪಡೆಗಳನ್ನು ರಚಿಸಿ ಕಾರ್ಯಾಚರಣೆಗಿಳಿದಿದೆ. ಸರಿ ಸುಮಾರಾಗಿ ಎಲ್ಲ ರೀತಿಯ ಜ್ವರಗಳು ಕಾಣಿಸಿಕೊಳ್ಳುವುದು ಈ ಸೊಳ್ಳೆಯಿಂದಲೇ ಎಂದು ಹೇಳಲಾಗುತ್ತದೆ. ಮಾರುಕಟ್ಟೆಗಳಲ್ಲಿ ಸಿಗುವ ಲಿಕ್ವಿಡ್, ಕಾಯಿಲ್ ಗಳಿಗೆ ಸೊಳ್ಳೆ ಸಾಯಲಾರದು. ಗುಂಯ್ ಗುಡುವ ಸದ್ದು ನಿಂತರೂ ಅದು ಸಾವನ್ನಪ್ಪಿದೆ ಎಂದು ತಿಳಿಯಲು ಸಾಧ್ಯವಿಲ್ಲ. ಕ್ವಾಯಿಲ್ ಅಥವಾ ಲಿಕ್ವಿಡ್ ಪ್ರಭಾವ ಕಡಿಮೆಯಾದ ನಂತರ ಮತ್ತೆ ಸಂಗೀತ ಶುರುವಿಟ್ಟುಕೊಳ್ಳಲಿದೆ. ಈ ಬಾರಿ ಜಿಲ್ಲೆಯಲ್ಲಿ ಸೊಳ್ಳೆಗಳ ಕಾಟ ಅಧಿಕವೆಂದೇ ಕಾಣಿಸುತ್ತಿದ್ದು, ಸೊಳ್ಳೆಯನ್ನು ಸಂಪೂರ್ಣ ಸಾಯಿಸಿ ಅದರ ಸಂತತಿಯನ್ನೇ ನಾಶಗೊಳಿಸಲು ಸೊಳ್ಳೆ ಬ್ಯಾಟುಗಳು ಇದೀಗ ನಗರದ ಎಲ್ಲ ಪ್ರಮುಖ ರಸ್ತೆಗಳಲ್ಲಿ ಕಂಡು ಬರುತ್ತಿವೆ.

ಮೈಸೂರು ಜಿಲ್ಲಾಧಿಕಾರಿ ಕಚೇರಿಗಳ ಆಸುಪಾಸು, ಅಗ್ರಹಾರದ ಕೆಲವು ಬೀದಿಗಳು, ವಿಶ್ವವಿದ್ಯಾನಿಲಯದ ಕೆಲವು ರಸ್ತೆಗಳಲ್ಲಿ ಈ ಸೊಳ್ಳೆ ಬ್ಯಾಟ್ ಮಾರಾಟಗಾರರು ಕಂಡು ಬರುತ್ತಿದ್ದಾರೆ.  ಹಾಸ್ಟೆಲ್ ಆಸುಪಾಸುಗಳಲ್ಲಿಯೂ ಸೊಳ್ಳೆಗಳ ಕಾಟ ಹೆಚ್ಚುತ್ತಿದ್ದು, ಹಾಸ್ಟೆಲ್ ವಿದ್ಯಾರ್ಥಿ-ವಿದ್ಯಾರ್ಥಿನಿಯರೂ ಕೂಡ ಸೊಳ್ಳೆ ಬ್ಯಾಟ್ ಖರೀದಿಸುತ್ತಿದ್ದಾರೆ. ಸಾರ್ವಜನಿಕರು ಬ್ಯಾಟ್ ಒಂದಕ್ಕೆ 150 ರಿಂದ ಆರಂಭವಾಗಿ 280ರವೆರಗೂ ಹಣ ನೀಡಿ ಖರೀದಿಗೆ ಮುಗಿ ಬಿದ್ದಿದ್ದು, ದಿನಕ್ಕೆ ಕಡಿಮೆಯೆಂದರೂ 50ಕ್ಕಿಂತ ಹೆಚ್ಚು ಬ್ಯಾಟ್ ಗಳು ಮಾರಾಟವಾಗುತ್ತಿವೆ ಎನ್ನುತ್ತಾರೆ ಬೀದಿ ಬದಿ ಬ್ಯಾಟ್ ಇಟ್ಟುಕೊಂಡಿರುವ ವ್ಯಾಪಾರಸ್ಥರು. ಈ ಬಾರಿ ಸೊಳ್ಳೆ ಬ್ಯಾಟ್ ಮಾರಾಟಗಾರರಿಗೆ ಒಳ್ಳೆಯ ಬೇಡಿಕೆ ಬಂದಿದೆ. ಅದೇನೇ ಇರಲಿ ಮಾರಕ ರೋಗಗಳನ್ನು ಹರಡುವ ಸೊಳ್ಳೆಗಳು ನಗರದಲ್ಲಿ ಶಾಶ್ವತವಾಗಿ ಕಣ್ಮರೆಯಾಗಿ, ಜಿಲ್ಲೆಯಲ್ಲಿ ಹರಡಿರುವ ಜ್ವರ ಕಡಿಮೆಯಾದರೆ ಸಾಕು ಎಂಬ ಆಶಯ ಸಾರ್ವಜನಿಕರದ್ದು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: