ಸುದ್ದಿ ಸಂಕ್ಷಿಪ್ತ

ಜು.6 ರಿಂದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ

ಬೆಂಗಳೂರು, ಜು.5: ಪಯೋನಿಯರ್ ಕ್ಲಬ್ ವತಿಯಿಂದ ಪದ್ಮನಾಭನಗರದ ವಿಧಾನಸಭಾ ಕ್ಷೇತ್ರದ ಯಡಿಯೂರು ಕೆರೆ ಬಳಿಯ ಅಟಲ್ ಬಿಹಾರಿವಾಜಪೇಯಿ ಕ್ರೀಡಾಂಗಣದಲ್ಲಿ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ.

ಪಂದ್ಯಾವಳಿ ಜು.6ರಿಂದ ಆರಂಭವಾಗಿ 9ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ. ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಅವರ ತಂದೆ ಜಾಲಹಳ್ಳಿ ರಾಮಯ್ಯ ಸ್ಮರಣಾರ್ಥ ಈ ಕ್ರೀಡಾಕೂಟ ಆಯೋಜಿಸಿದ್ದು, ಈಗಾಗಲೇ ತಂಡಗಳ ಆಯ್ಕೆ ಪ್ರಕ್ರಿಯೆಯೂ ನಡೆದಿದ್ದು, ಅಂತಿಮವಾಗಿ ರಾಜ್ಯದ ಅತ್ಯುತ್ತಮ ಪುರುಷರ 45 ತಂಡಗಳು, ಮಹಿಳೆಯರ 15 ತಂಡಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿವೆ. ಪಂದ್ಯಾವಳಿ ಸಂದರ್ಭ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಕಬಡ್ಡಿ ಆಟಗಾರರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಪ್ರತಿ ದಿನ ಸಂಜೆ 5ರಿಂದ ಕ್ರೀಡಾಂಗಣದಲ್ಲಿ ಕ್ರೀಡಾ ಕೂಟ ನಡೆಯಲಿದ್ದು, ವಿಜೇತ ತಂಡಗಳಿಗೆ ಆಕರ್ಷಕ ಟ್ರೋಪಿ ಹಾಗೂ ನಗದು ಬಹುಮಾನ ನೀಡಲಾಗುತ್ತದೆ. ಪ್ರಥಮ ಬಹುಮಾನ ಒಂದು ಲಕ್ಷ, ದ್ವಿತೀಯ 50ಸಾವಿರ, ತೃತೀಯ 35 ಸಾವಿರ ಹಾಗೂ ಚತುರ್ಥ ಬಹುಮಾನ 25 ಸಾವಿರ ಮತ್ತು ಟ್ರೋಪಿ ನೀಡಲಾಗುವುದು. ಇದಲ್ಲದೆ ಉತ್ತಮ ದಾಳಿಕಾರ, ಹಿಡಿತಗಾರ, ಸತ್ತಮ ಆಟಗಾರ ಸೇರಿದಂತೆ ಇನ್ನಿತರ ವಿಶೇಷ ಪ್ರಶಸ್ತಿಗಳನ್ನು ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ನೀಡಲಾಗುತ್ತದೆ.ಆಧುನಿಕ ಕ್ರೀಡೆಗಳ ಭರಾಟೆಯಲ್ಲಿ ಗ್ರಾಮೀಣ ಕ್ರೀಡೆಗಳು ಮೂಲೆಗುಂಪಾಗುತ್ತಿದ್ದು, ಅದನ್ನು ಪ್ರೋತ್ಸಾಹಿಸುವ ಸಲುವಾಗಿ ಕಬಡ್ಡಿ ಪಂದ್ಯಾವಳಿಯನ್ನು ಏರ್ಪಡಿಸಲಾಗಿರುವುದಾಗಿ ಸಂಘಟಕರು ತಿಳಿಸಿದ್ದಾರೆ. (ವರದಿ: ಎಲ್.ಜಿ)

Leave a Reply

comments

Related Articles

error: