ಕರ್ನಾಟಕ

ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ನೌಕರ ವರ್ಗ ಬದ್ದತೆಯಿಂದ ಕೆಲಸ ಮಾಡಬೇಕು : ಸಚಿವ ರಮೇಶ್‌ಕುಮಾರ್

ರಾಜ್ಯ(ತುಮಕೂರು)ಜು.5:- ತಾಯಿ ಮತ್ತು ಮಕ್ಕಳ ಆರೋಗ್ಯ ದೇಶದ ಆರೋಗ್ಯವಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ವೈದ್ಯರು ಸೇರಿದಂತೆ ಪ್ರತಿಯೊಬ್ಬ ನೌಕರ ವರ್ಗ ಬದ್ದತೆಯಿಂದ ಕೆಲಸ ಮಾಡಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ ಆರ್ ರಮೇಶ್‌ಕುಮಾರ್ ಹೇಳಿದರು.
ಸಿರಾ ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಏರ್ಪಡಿಸಿದ್ದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಸರ್ಕಾರಿ ಆಸ್ಪತ್ರೆ ಸಮುದ್ರ ಇದ್ದ ಹಾಗೆ. ಅಲ್ಪಸ್ವಲ್ಪ ಲೋಪದೋಷಗಳು ಇರುತ್ತವೆ. ಆದರೆ ದುಷ್ಟರನ್ನು ರಕ್ಷಣೆ ಮಾಡುವ ಉದ್ದೇಶ ನಮಗಿಲ್ಲ. ಎಲ್ಲರೂ ಖಾಸಗಿ ಆಸ್ಪತ್ರೆಗಳಿಗೆ ಹೋಗುವಂತಿದ್ದರೆ ಸರ್ಕಾರಿ ಆಸ್ಪತ್ರೆಗಳೇ ಬೇಕಾಗುತ್ತಿರಲಿಲ್ಲ.  ಇಂದು ಬಡಜನರಿಗೆ ಸರ್ಕಾರಿ ಆಸ್ಪತ್ರೆಗಳು ದೇವಾಲಯ ಇದ್ದ ಹಾಗೆ. ನಾವು ಧರ್ಮದರ್ಶಿಗಳು, ಭಯ ಭಕ್ತಿಯಿಂದ ಕೆಲಸ ಮಾಡುತ್ತಿದ್ದು, ಇದಕ್ಕೆ ಯಜಮಾನರು ನೀವೇ. ನಿಮಗೆ ಲೆಕ್ಕ ಒಪ್ಪಿಸುವುದು ನಮ್ಮ ಜವಾಬ್ದಾರಿ ಎಂದರು. ಸಿರಾ ನಗರ ದಿನೇ ದಿನೇ ಬೆಳೆಯುತ್ತಿದೆ. ಪ್ರತಿ ದಿನ 1000 ಹೊರ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಿರುವಾಗ ಈ ಆಸ್ಪತ್ರೆಯ ಅಭಿವೃದ್ದಿ ನಮ್ಮ ಜವಾಬ್ದಾರಿಯಾಗಿದ್ದು, ಈ ನಿಟ್ಟಿನಲ್ಲಿ ಇಲ್ಲಿಗೆ ರಕ್ತ ಶೇಖರಣಾ ಘಟಕ, 24 ಗಂಟೆ ನಿರಂತರವಾಗಿ ಉಚಿತ ಡಯಾಲಿಸಿಸ್ ಸೇವೆ, ತೀವ್ರ ನಿಗಾ ಘಟಕ  ಇದರ ಜತೆಗೆ ಬರುವಂತಹ ಜನರಿಗೆ ಅನುಕೂಲವಾಗಲು ಜನರಿಕ್ ಔಷಧಿ, ಶುದ್ದ ನೀರು ಘಟಕ, ಕ್ಯಾಂಟೀನ್ ವ್ಯವಸ್ಥೆ ಹಾಗೂ ಹಾಪ್‌ಕಾಮ್ಸ್ ಈ ಎಲ್ಲಾ ಸೌಲಭ್ಯಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ, ಸಂಸದ ಚಂದ್ರಪ್ಪ, ಜಿ.ಪಂ. ಅಧ್ಯಕ್ಷೆ ಲತಾ ರವಿಕುಮಾರ್, ನಗರಸಭೆ ಅಧ್ಯಕ್ಷ ಅಮಾನುಲ್ಲಾಖಾನ್, ತಾ.ಪಂ. ಅಧ್ಯಕ್ಷೆ ಹಂಸವೇಣಿ,  ಡಿ.ಹೆಚ್.ಒ. ರಂಗಸ್ವಾಮಿ, ಉಪವಿಭಾಗಾಧಿಕಾರಿ ವೆಂಕಟೇಶಯ್ಯ, ಪೌರಾಯುಕ್ತ ಯೋಗಾನಂದ ಮತ್ತಿತರರು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: