ಕರ್ನಾಟಕ

ಪತ್ರಿಕೆಗಳು ಜ್ಞಾನ ಬಿತ್ತರಿಸುವ ಬಯಲು ವಿಶ್ವವಿದ್ಯಾಲಯಗಳು : ಬಿಳಿಗೆರೆ ಕೃಷ್ಣಮೂರ್ತಿ

ರಾಜ್ಯ(ತುಮಕೂರು)ಜು.5:-ವಿಶ್ವವಿದ್ಯಾಲಯಗಳು ಜ್ಞಾನ ಅರಸಿ ಬರುವವರಿಗೆ ನಾಲ್ಕು ಗೋಡೆಗಳ ಮಧ್ಯೆ ಜ್ಞಾನ ಕೊಡುವ ಕೇಂದ್ರಗಳು. ಪತ್ರಿಕೆಗಳು ಹಾದಿ ಬೀದಿ, ಮನೆ ಮಠ, ಹೋಟೆಲ್, ಸಲೂನ್ ಹೀಗೆ ಎಲ್ಲಾ ಕಡೆ ಜ್ಞಾನ ಬಿತ್ತರಿಸುವ ಬಯಲು ವಿಶ್ವವಿದ್ಯಾಲಯಗಳು ಎಂದು ಕವಿ ಬಿಳಿಗೆರೆ ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.

ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹುಳಿಯಾರು ಪತ್ರಿಕಾ ವರದಿಗಾರರು ಹಾಗೂ ವಿತರಕರ ಸಂಘದ ವತಿಯಿಂದ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪತ್ರಿಕೆಗಳು ಸಮಾಜದ ಜ್ಞಾನ ದೀಪಗಳಾಗಿದ್ದು ಪತ್ರಿಕೆ ಓದಿ ಮತದಾರರು ಸರ್ಕಾರವನ್ನು ಉರುಳಿಸಿದ್ದಾರೆ. ವಿದ್ಯಾರ್ಥಿಗಳು ಸ್ಮರ್ಧಾತ್ಮಕ ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸಿದ್ದಾರೆ. ಅಧಿಕಾರಿಗಳು ಎಚ್ಚೆತ್ತು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ರಾಜಕಾರಣಿಗಳು ಸಮಸ್ಯೆಗಳನ್ನು ಪರಿಹರಿಸಿದ್ದಾರೆ. ಬಹುಮುಖ್ಯವಾಗಿ ಮನುಷ್ಯನಿಗೆ ಸ್ವಾತಂತ್ರ್ಯ ಆಲೋಚನ ಕ್ರಮ ಹುಟ್ಟು ಹಾಕುತ್ತದೆ. ಈ ನಿಟ್ಟಿನಲ್ಲಿ ಮುದ್ರಣ ಮಾಧ್ಯವು ಸಮಾಜದಲ್ಲಿ ಗಟ್ಟಿಯಾಗಿ ನೆಲೆ ನಿಲ್ಲಬೇಕಿದೆ. ಇದಕ್ಕಾಗಿ ಪ್ರತಿಯೊಬ್ಬರೂ ಪತ್ರಿಕೆಗಳನ್ನು ಕೊಂಡು ಓದುವ ಹವ್ಯಾಸ ಬೆಳೆಸಿಕೊಳ್ಳಿ ಎಂದು ಹೇಳಿದರು. ಮನೆಯೇ ಮೊದಲ ಪಾಠಶಾಲೆಯೆನ್ನುವಂತೆ ಪತ್ರಿಕೆ ಓದುವ ಅಭಿರುಚಿಯನ್ನು ಮೊದಲು ಮನೆಯಲ್ಲಿ ಪೋಷಕರು ಹುಟ್ಟು ಹಾಕಬೇಕು. ಶಾಲಾ-ಕಾಲೇಜುಗಳಲ್ಲಿ ಅಧ್ಯಾಪಕರು ವಿದ್ಯಾರ್ಥಿಗಳಿಗೆ ಕಥೆ, ಕವಿತೆ, ಪ್ರಬಂಧ, ಗೋಡೆಪತ್ರಿಕೆ ಹೀಗೆ ಬರವಣಿಗೆಗೆ ಉತ್ತೇಜನ ನೀಡಬೇಕಿದೆ. ಇದರಿಂದ ವಿದ್ಯಾರ್ಥಿಗಳು ದಿನಪತ್ರಿಕೆ ಓದುವಿನೆಡೆ ಆಕರ್ಷಿತರಾಗುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಶಿಕ್ಷಕರು ಪಠ್ಯಕ್ಕೆ ಮಾತ್ರ ಸೀಮಿತವಾಗಿ ವಿದ್ಯಾರ್ಥಿಗಳ ಬೌದ್ಧಿಕ ಚಿಂತನೆ ಚುರುಕುಗೊಳಿಸದ ಆರೋಪ ಕೇಳಿ ಬರುತ್ತಿದೆ. ಇನ್ನು ಸ್ತ್ರೀಯರು ಧಾರವಾಹಿಯ ದಾಸರಾಗಿ ಪತ್ರಿಕೆ ಓದುವುದಿರಲಿ ಕೈಯಲ್ಲಿ ಮುಟ್ಟುವ ಸಾಹಸಕ್ಕೂ ಕೈ ಹಾಕದಾಗಿದ್ದಾರೆ. ಇನ್ನಾದರೂ ಬದಲಾಗಬೇಕಿದೆ. ಕನಿಷ್ಠ ಪಕ್ಷ ಪತ್ರಿಕೆಯ ಎಡಿಟೋರಿಯಲ್ ಪುಟಗಳನ್ನು ಪ್ರತಿ ದಿನ ಓದುವ ಹವ್ಯಾಸ ಬೆಳೆಸಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಪ್ರಸನ್ನಕುಮಾರ್, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಏಜೆಂಟ್‍ಕುಮಾರ್, ಪತ್ರಕರ್ತರಾದ ಡಿ.ಆರ್.ನರೇಂದ್ರಬಾಬು, ರಂಗನಕೆರೆಮಹೇಶ್, ಕಂಪನಹಳ್ಳಿಯೋಗೀಶ್, ಹೊಯ್ಸಲಕಟ್ಟೆ ದೇವರಾಜು, ಸುರೇಶ್, ಮೈಲಾರಿ, ಉಪನ್ಯಾಸಕರಾದ ಶಶಿಭೂಷಣ್, ಶಿವರುದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: