ಸುದ್ದಿ ಸಂಕ್ಷಿಪ್ತ

ಹೆಚ್.ವಿಶ್ವನಾಥ್ ಸೇರ್ಪಡೆ : ಜೆಡಿಎಸ್ ಪರಿಶಿಷ್ಟ ಘಟಕ ಸ್ವಾಗತ

ಮಡಿಕೇರಿ, ಜು.5 : ಕಾಂಗ್ರೆಸ್‍ನ ಹಿರಿಯ ಮುಖಂಡ ಹಾಗೂ ಮಾಜಿ ಸಂಸದ ಹೆಚ್.ವಿಶ್ವನಾಥ್ ಅವರು ರೈತರ ಪರವಾದ ಜಾತ್ಯಾತೀತ ಜನತಾದಳ ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ಸ್ವಾಗತಾರ್ಹ ಎಂದು ತಿಳಿಸಿರುವ ಜೆಡಿಎಸ್‍ನ ಪರಿಶಿಷ್ಟ ಘಟಕದ ಜಿಲ್ಲಾಧ್ಯಕ್ಷರಾದ ಹೆಚ್.ಎನ್.ಯೋಗೇಶ್‍ಕುಮಾರ್, ವಿಶ್ವನಾಥ್ ಆಗಮನದಿಂದ ಜೆಡಿಎಸ್ ಬಲ ಮತ್ತಷ್ಟು ಹೆಚ್ಚಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ಕೊಡಗು ಜಿಲ್ಲೆಯಲ್ಲಿರುವ ವಿಶ್ವನಾಥ್ ಅವರ ಹಿತೈಷಿಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದು, ಇದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿನ ದಿಕ್ಸೂಚಿಯಾಗಿದೆ ಎಂದು ತಿಳಿಸಿದ್ದಾರೆ.

ಸುಮಾರು 20 ತಿಂಗಳ ಕಾಲ ರಾಜ್ಯವನ್ನಾಳಿದ ಹೆಚ್.ಡಿ.ಕುಮಾರಸ್ವಾಮಿ ಅವರ ಅಧಿಕಾರವಧಿಯಲ್ಲಿ ರಾಜ್ಯದಲ್ಲಿ ಶಾಂತಿ, ಸೌಹಾರ್ದತೆ ನೆಲೆಸಿತ್ತು. ರೈತರ ಪರವಾದ ನಿಲುವುಗಳನ್ನೇ ತೆಗೆದುಕೊಳ್ಳುತ್ತಿದ್ದ ಸರಕಾರ ಜನಮನ್ನಣೆಯನ್ನು ಗಳಿಸಿತ್ತು. ಇದೇ ರೀತಿಯ ಆಡಳಿತವನ್ನು ರಾಜ್ಯದ ಜನ ಬಯಸಿದ್ದು, ಈ ಬಾರಿ ಜೆಡಿಎಸ್ ಪರ ಒಲವು ಹೆಚ್ಚಾಗಿದೆ.

ಈ ಬೆಳವಣಿಗೆಯನ್ನು ಗಮನಿಸುತ್ತಿರುವ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿನ ಅನೇಕರು ಜೆಡಿಎಸ್ ಗೆ ಸೇರ್ಪಡೆಗೊಳ್ಳುತ್ತಿದ್ದಾರೆ. ಕೊಡಗು ಜಿಲ್ಲೆಯಲ್ಲೂ ಈ ಎರಡೂ ಪಕ್ಷಗಳ ಅಧಿಕ ಮಂದಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಇನ್ನು ಕೆಲವೇ ದಿನಗಳಲ್ಲಿ ಜೆಡಿಎಸ್‍ಗೆ ಸೇರ್ಪಡೆಗೊಳ್ಳಲಿದ್ದಾರೆ. ಇದನ್ನು ಸ್ವಾಗತಿಸುವುದಾಗಿ ತಿಳಿಸಿರುವ ಯೋಗೇಶ್ ಕುಮಾರ್ ಮುಂದಿನ ವಿಧಾನಸಭಾ ಚುನಾವಣೆಯನ್ನು ಪಕ್ಷದ ಮುಖಂಡರಾದ ಮಾಜಿ ಸಚಿವ ಬಿ.ಎ.ಜೀವಿಜಯ ಹಾಗೂ ಪಕ್ಷದ ರಾಜ್ಯ ಕಾರ್ಯದರ್ಶಿ, ಕೊಡಗು ಜಿಲ್ಲಾ ಉಸ್ತುವಾರಿ ವಿ.ಎಂ.ವಿಜಯ ಅವರ ನೇತೃತ್ವದಲ್ಲಿ ಎದುರಿಸಲಾಗುವುದೆಂದು ಸ್ಪಷ್ಟಪಡಿಸಿದ್ದಾರೆ.

ಕಳೆದ ಬಾರಿಯ ಚುನಾವಣೆಯಲ್ಲಿ ಅಲ್ಪ ಮತದಿಂದ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ಸೋಲು ಅನುಭವಿಸಿತ್ತು. ಆದರೆ ಈ ಬಾರಿ ಹೆಚ್.ವಿಶ್ವನಾಥ್ ಹಾಗೂ ಅವರ ಬೆಂಬಲಿಗರ ಸಹಕಾರದಿಂದ ಬಿ.ಎ.ಜೀವಿಜಯ ಅವರಿಗೆ ಸುಲಭ ಜಯ ಲಭಿಸಲಿದೆ ಎಂದು ಯೋಗೇಶ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜಾತ್ಯಾತೀತ ನಿಲುವಿನೊಂದಿಗೆ ರೈತರ ಪರವಾಗಿ ಕಾರ್ಯನಿರ್ವಹಿಸುತ್ತಾ ರಾಜ್ಯದ ಹಿತ ಕಾಯುತ್ತಿರುವ ಜೆಡಿಎಸ್ ಪರ ಅನೇಕರು ಒಲವು ವ್ಯಕ್ತಪಡಿಸಿದ್ದಾರೆ. ಇತರ ಪಕ್ಷಗಳ ಎಲ್ಲಾ ಘಟಕಗಳ ಪ್ರಮುಖರು ಹಾಗೂ ಕಾರ್ಯಕರ್ತರು ಪಕ್ಷಕ್ಕೆ ಸೇರ್ಪಡೆಗೊಳ್ಳುವ ಮುನ್ಸೂಚನೆ ನೀಡಿದ್ದಾರೆ. ಈ ರಾಜಕೀಯ ಬೆಳವಣಿಗೆಯನ್ನು ತಾವು ಸ್ವಾಗತಿಸುವುದಾಗಿ ಯೋಗೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: