ಮೈಸೂರು

ಅಭಿವೃದ್ಧಿ ಕಾರ್ಯಗಳಿಗೆ ಹಣ ಮಂಜೂರು ಮಾಡಲು ಕೇಂದ್ರ ಸರ್ಕಾರ ವಿಫಲ: ಧ್ರುವ ನಾರಾಯಣ ಆರೋಪ

ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ ಮತ್ತು ಸಂಸದ್ ಆದರ್ಶ ಗ್ರಾಮಯೋಜನೆಗಳು ಪರಿಣಾಮಕಾರಿಯಾಗಿ ಕಾರ್ಯಗತವಾಗುತ್ತಿಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಹಣ ಮಂಜೂರು ಮಾಡದೇ ಜನರಿಗೆ ಅದರ ಲಾಭ ದೊರಕುವಂತೆ ಮಾಡುವಲ್ಲಿ  ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಚಾಮರಾಜನಗರ ಸಂಸದ ಧ್ರುವ ನಾರಾಯಣ ಆರೋಪಿಸಿದರು.

ಜಲದರ್ಶಿನಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಧ್ರುವನಾರಾಯಣ ಮಾತನಾಡಿ ಕೇಂದ್ರದ ಎನ್ ಡಿಎ ಸರ್ಕಾರ ರಾಜ್ಯ ಸರ್ಕಾರದ ಜೊತೆ ಮತ್ತು ಬಿಜೆಪಿ ಸಂಸದರಲ್ಲದವರ ಜೊತೆ ನಕಾರಾತ್ಮಕವಾಗಿ ವರ್ತಿಸುತ್ತಿದೆ. ರಸ್ತೆ ದುರಸ್ತಿಗಾಗಿ ಹಣವನ್ನು ಬಿಡುಗಡೆ ಮಾಡುತ್ತಿಲ್ಲ. ಬಿಜೆಪಿ ಸಂಸದರು ನನ್ನ ವಿರುದ್ಧವಾಗಿದ್ದು ಯಾವ ಯೋಜನೆಯನ್ನೂ ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತರಲು ಬಿಡುತ್ತಿಲ್ಲ. ಅಷ್ಟೇ ಅಲ್ಲದೇ ಅಭಿವೃದ್ಧಿ ಕಾರ್ಯಗಳಿಗಾಗಿ ಯಾಕೆ ಹಣವನ್ನು ಬಿಡುಗಡೆ ಮಾಡುತ್ತಿಲ್ಲ ಎಂದೂ  ಕೇಂದ್ರ ಸರ್ಕಾರವನ್ನು ಪ್ರಶ್ನಿಸುತ್ತಿಲ್ಲ ಎಂದರು.

ನನ್ನ ಕ್ಷೇತ್ರದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದ ಸಹಾಯ ತೆಗೆದುಕೊಂಡಿದ್ದೇನೆ. ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಹಣ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಹೆಚ್.ಕೆ.ಪಾಟೀಲ್ ಅವರಿಂದ ಪ್ರಧಾನಿಯವರಿಗೆ ಪತ್ರ ಕಳುಹಿಸಲಾಗಿದೆ. ಆದರೂ ಯವುದೇ ಸಕಾರಾತ್ಮಕ ಪ್ರತಿಕ್ರಿಯೆ ಕೇಂದ್ರ ಸರ್ಕಾರದಿಂದ ಬಂದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಈಗಾಗಲೇ ರಾಜ್ಯದಲ್ಲಿ 110 ತಾಲೂಕುಗಳು ಬರಪೀಡಿತವೆಂದು ಘೋಷಿಸಲಾಗಿದೆ. ಗ್ರಾಮೀಣಾಭಿವೃದ್ಧಿಗಾಗಿ ಮತ್ತು ಬರಪೀಡಿತ ಜನರಿಗೆ ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಜೋಜನೆಯಡಿ ಉದ್ಯೋಗ ದೊರಕಿಸಿ ಅವರಿಗೆ ಆಹಾರ ನೀಡಲು ಸಾವಿರ ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರಲ್ಲದೆ ಮುಂದಿನ ದಿನಗಳಲ್ಲಿ ಸಂಸತ್ ನಲ್ಲಿಯೂ ಈ ಕುರಿತು ಧ್ವನಿ ಎತ್ತುವುದಾಗಿ ತಿಳಿಸಿದರು.

ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ರಾಜೀನಾಮೆ ಕುರಿತಂತೆ ಮಾತನಾಡಿ ಶ್ರೀನಿವಾಸ್ ಪ್ರಸಾದ್ ಹಿರಿಯ ನಾಯಕರು. ಅವರ ನಿರ್ಧಾರ ವಿಷಾದನೀಯ. ಕೆಪಿಸಿಸಿ ಅಧ್ಯಕ್ಷರಲ್ಲಿ ಅವರ ಮನವೊಲಿಸಿ ಕಾಂಗ್ರೆಸ್ ನಲ್ಲಿಯೇ ಇರುವಂತೆ ಮಾಡಿ ಎಂದಿದ್ದೆ. ಹಲವು ಊಹಾಪೋಹಗಳು ಹುಟ್ಟಿಕೊಂಡವು.  ಪಕ್ಷಕ್ಕೆ ಬದ್ಧನಾಗಿ ಸುಮ್ಮನಿದ್ದೇನೆ ಎಂದರು.

Leave a Reply

comments

Related Articles

error: