ಮೈಸೂರು

ಸನಾತನಿಗಳ ಅವೈಜ್ಞಾನಿಕ ಚಿಂತನೆ ಮನುಕುಲದ ಏಳಿಗೆಗೆ ಮಾರಕ: ಕಾಳೇಗೌಡ ನಾಗವಾರ

ಮೈಸೂರು, ಜು.೬: ದೇಶದಲ್ಲಿ ಅವೈಜ್ಞಾನಿಕ ಚಿಂತನೆ ನಮ್ಮೆಲ್ಲರ ನಡುವೆಯೇ ಇರಬೇಕು ಎಂಬ ಸನಾತನಿಗಳ ಚಿಂತನೆ ಮನುಕುಲದ ಏಳಿಗೆಗೆ ಮಾರಕವಾದುದು ಎಂದು ಪ್ರಗತಿಪರ ಚಿಂತಕ ಪ್ರೊ.ಕಾಳೇಗೌಡ ನಾಗವಾರ ಅಭಿಪ್ರಾಯಪಟ್ಟರು.
ಗುರುವಾರ ನಗರದ ರೋಟರಿ ಸಭಾಂಗಣದಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ಆಯೋಜಿಸಿದ್ದ ನಾಗೇಶ್ ಹೆಗಡೆ ಅವರ ಆಧುನಿಕ ಬದುಕಿನ ಪ್ರತಿಕ್ಷಣವೂ ಗೋ ಮಯ ಲೇಖನದ ಕರಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕುವೆಂಪು ಅವರು ವಿಶ್ವವಿದ್ಯಾನಿಲಯದ ವಿಜ್ಞಾನಿಗಳ ಕುರಿತು ಮಾತನಾಡಿ ಪ್ರಾಥಮಿಕ ಬದುಕಿನ ತಿಳುವಳಿಕೆಯೂ ಇಲ್ಲದೆ ವಿಜ್ಞಾನಿಗಳು ಬದುಕುತ್ತಿದ್ದಾರೆ. ಅವರು ಕೇವಲ ವಿಜ್ಞಾನದ ಮೂಟೆಗಳನ್ನು ಹೊರುವ ಹೇಸರಗತ್ತೆಗಳು ಎಂದು ಹೇಳಿದ್ದರು. ಅದು ಇತ್ತೀಚಿನ ದಿನಗಳಲ್ಲಿ ನಿಜವೂ ಆಗುತ್ತಿದೆ. ಮನುಷ್ಯರಲ್ಲಿ ವೈಜ್ಞಾನಿಕ ಚಿಂತನೆಗಳನ್ನು ಬೆಳೆಸುವ ಕಾರ್ಯವನ್ನು ವಿಜ್ಞಾನಿಗಳು ಮಾಡುತ್ತಿಲ್ಲ. ಇನ್ನೊಬ್ಬರ ಆಹಾರ ಪದ್ದತಿಯನ್ನು ನಿರ್ಧರಿಸುವ ಹಕ್ಕು ಯಾರಿಗೂ ಇಲ್ಲ. ಗೋ ಮಾಂಸದ ಅರ್ಧದಷ್ಟು ಆಹಾರಕ್ಕೆ ಬಳಕೆಯಾದರೆ, ಉಳಿದ ಅರ್ಧ ಇತರ ದಿನಬಳಕೆ ವಸ್ತುಗಳ ತಯಾರಿಕೆಗೆ ಬಳಕೆಯಾಗುತ್ತದೆ. ಭಾರತೀಯ ಸಂಪ್ರದಾಯದಲ್ಲಿ ಗೋಮಾಂಸ ಸೇವನೆ ಮಾಡಿರುವ ನೂರಾರು ಉದಾಹರಣೆಗಳಿರುವಾಗ ಸಂಪೂರ್ಣವಾಗಿ ಗೋಮಾಂಸ ಸೇವನೆಯನ್ನೇ ನಿಷೇಧ ಮಾಡುತ್ತೇವೆ ಎಂಬುದು ಅವಿವೇಕಿತನದ ಪರಮಾವದಿ. ಹಾಗಾಗಿ ವೈಜ್ಞಾನಿಕ ಚಿಂತನೆಗಳನ್ನು ಬೆಳೆಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಮಾಜವಾದಿ ಹೋರಾಟಗಾರ ಪ.ಮಲ್ಲೇಶ್, ಸಾಹಿತಿ ಪ್ರೊ.ಕೆ.ಎಸ್.ಭಗವಾನ್, ಪತ್ರಕರ್ತ ರಾಜಶೇಖರ ಕೋಟಿ, ಮಹಿಳಾ ಹೋರಾಟಗಾರ್ತಿ ರತಿರಾವ್, ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: