ಕರ್ನಾಟಕಪ್ರಮುಖ ಸುದ್ದಿ

ಜೆಡಿಎಸ್ ಪಕ್ಷ ಸ್ವಯಂ ಬಲದಿಂದ ಅಧಿಕಾರಕ್ಕೆ ಬರಲಿದೆ : ಎಚ್.ಡಿ.ದೇವೇಗೌಡ ವಿಶ್ವಾಸ

ರಾಜ್ಯ(ಮಂಡ್ಯ) ಜು.6:- ರಾಜ್ಯದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಸ್ವಯಂ ಬಲದಿಂದ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದ ಎಸ್‍ಟಿಜಿ ಶಿಕ್ಷಣ ಮತ್ತು ಸಾಂಸ್ಕೃತಿಕ ಚಾರಿಟಬಲ್ ಟ್ರಸ್ಟ್‍ನ ವತಿಯಿಂದ ನಡೆದ ಎಸ್‍ಟಿಜಿ ಪಬ್ಲಿಕ್ ಸ್ಕೂಲ್ ಲೋಕಾರ್ಪಣೆ, ಅಂಕಮ್ಮ ಮತ್ತು ಶ್ರೀ ಸಣ್ಣತಮ್ಮೇಗೌಡ 25ನೇ ವರ್ಷದ ಪುಣ್ಯಸ್ಮರಣೆ ಹಾಗೂ ನಾನಾ ಕ್ಷೇತ್ರದ ಸಾಧಕರಿಗೆ ಅಭಿನಂಧನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಬೇಕು ಎನ್ನುವುದು ಕೇವಲ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವುದಕ್ಕೆ ಮಾತ್ರವಲ್ಲ. ಜನರ ಕಷ್ಟ ಸುಖಗಳಿಗೆ ಸ್ಪಂದಿಸಿ, ರೈತರ ಸಮಸ್ಯೆಗಳನ್ನು ನಿವಾರಣೆ ಮಾಡುವುದಕ್ಕೆ ಜೆಡಿಎಸ್ ಅಧಿಕಾರಕ್ಕೆ ಬರಬೇಕು ಎನ್ನುವುದು ನನ್ನ ಹಂಬಲವಾಗಿದೆ ಎಂದು ಹೇಳಿದರು. ನನ್ನ ಇಡೀ ಜೀವನವನ್ನು ರೈತರಿಗಾಗಿ ಮೀಸಲಿಟ್ಟಿದೇನೆ, ನನ್ನ ರಾಜಕೀಯ ಜೀವನದುದ್ದಕ್ಕೂ ರೈತರ, ಗ್ರಾಮೀಣ ಪ್ರದೇಶದ ಜನರ ಅಭಿವೃದ್ದಿಗಾಗಿಯೇ ಶ್ರಮಿಸಿದ್ದೇನೆ. ರಾಜ್ಯದಲ್ಲಿ ಎಲ್ಲಾ ಗ್ರಾಮೀಣ ಪ್ರದೇಶವನ್ನು ಅಭಿವೃದ್ದಿಪಡಿಸುವುದು ನನ್ನ ಕನಸ್ಸಾಗಿದ್ದು ಅದನ್ನು ನನಸು ಮಾಡುವುದಕ್ಕಾಗಿಯೇ 85 ವಯಸ್ಸಿನಲ್ಲೂ ಪಕ್ಷ ಸಂಘಟನೆಗಾಗಿ ರಾಜ್ಯಾದ್ಯಂತ ಓಡಾಡುತ್ತಿದ್ದೇನೆ ಎಂದರು.

ಸಂಸದ ಸಿ.ಎಸ್.ಪುಟ್ಟರಾಜು ಮಾತನಾಡಿ ಮುಂದಿನ ದಿನಗಳಲ್ಲಿ ಜೆಡಿಎಸ್ ಸ್ವಂತ ಬಲದಿಂದ ಅಧಿಕಾರಕ್ಕೆ ತಂದು ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎನ್ನುವುದು ದೇವೇಗೌಡರ ಆಶಯವಾಗಿದೆ ಎಂದು ತಿಳಿಸಿದರು. ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ ಹಿಂದುಳಿದವರು ರೈತ ಜನಸಾಮಾನ್ಯರ ದನಿಯಾಗಿರುವ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತಂದು ಎಚ್.ಡಿ.ದೇವೇಗೌಡ,ಎಚ್.ಡಿ.ಕುಮಾರಸ್ವಾಮಿ ಅವರ ಕೈ ಬಲಪಡಿಸಲು ಪಕ್ಷದ ಎಲ್ಲಾ ಕಾರ್ಯಕರ್ತರು ಶ್ರಮಿಸಬೇಕು ಎಂದರು. ವಿವಿಧ ಕ್ಷೇತ್ರದಲ್ಲಿ ಸಾದನೆಗೈದ ಸಾಧಕರನ್ನು ಸನ್ಮಾನಿಸಲಾಯಿತು.

ಜಾನಪದ ವಿದ್ವಾಂಸ ಡಾ.ಪಿ.ಕೆ.ರಾಜಶೇಖರ್, ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ, ಡಿ.ಸಿ.ತಮ್ಮಣ್ಣ, ಸಾ.ರಾ.ಮಹೇಶ್, ಕೆ.ಸಿ.ನಾರಾಯಣಗೌಡ, ಪರಿಷತ್ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ, ಎನ್.ಅಪ್ಪಾಜಿಗೌಡ. ಮೈಸೂರು ಮಹಾನಗರ ಪಾಲಿಕೆಯ ಮಹಾಪೌರ ಎಂ.ಜೆ.ರವಿಕುಮಾರ್, ಮಂಡ್ಯ ಜಿಪಂ ಅಧ್ಯಕ್ಷೆ ಪ್ರೇಮಕುಮಾರಿ, ಮೈಸೂರು ಜಿಪಂ ಅಧ್ಯಕ್ಷೆ ನಹಿಮಾ ಸುಲ್ತಾನಾ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: