ಕರ್ನಾಟಕ

ವಿದ್ಯಾರ್ಥಿ ಕೊಲೆಗೈದಿದ್ದ ವ್ಯಕ್ತಿಯ ಬಂಧನ

ರಾಜ್ಯ(ತುಮಕೂರು)ಜು.6:- ಶಾಲೆಗೆ ಹೋಗಿದ್ದ 6 ವರ್ಷದ ವಿದ್ಯಾರ್ಥಿಯನ್ನು ಕೊಲೆಗೈದು ಮನೆಯ ಹಿಂಭಾಗದ ಬೇಲಿಯ ಬಳಿ  ಎಸೆದಿದ್ದ ಆರೋಪಿಯನ್ನು  ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ.
ಕಳೆದ ಜೂ.28 ರಂದು ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿಯ ಬೇಡರ ಅಗ್ರಹಾರ ಗ್ರಾಮದ ಅಜ್ಜಿ ಮನೆಯಿಂದ ಶಾಲೆಗೆ ಹೋಗಿದ್ದ 1ನೇ ತರಗತಿಯ ವಿದ್ಯಾರ್ಥಿ ಯಶವಂತ್ (6) ಕೊಲೆಯಾಗಿದ್ದು, ಮಾರನೇ ದಿನ ಮನೆ ಹಿಂಭಾಗದ ಬೇಲಿಯಲ್ಲಿ ಶವ ಪತ್ತೆಯಾಗಿತ್ತು. ಕೊಲೆ ಆರೋಪಿ ವೀರೇಶ್ ಎಂಬುವನನ್ನು ತಿಪಟೂರಿನ ಬಳಿ ಬಂಧಿಸಲಾಗಿದೆ. ಆರೋಪಿ ಗುಲ್ಬರ್ಗಾ ಜಿಲ್ಲೆಯ ನಾಗೂರು ನಿವಾಸಿಯಾಗಿದ್ದು ಈತ ಬೆಂಗಳೂರಿನ ನಲಗದರನಹಳ್ಳಿಯಲ್ಲಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ. ಮೃತ ಬಾಲಕನ ತಾಯಿ ರಮಾದೇವಿ ಬೇಡರ ಅಗ್ರಹಾರದಿಂದ ಸದರಿ ಗಾರ್ಮೆಂಟ್ಸ್‌ಗೆ ಕೆಲಸಕ್ಕೆ ಬರುತ್ತಿದ್ದು, ಇವರಿಬ್ಬರ ಮಧ್ಯೆ ಹಲವು ವರ್ಷಗಳಿಂದ ಅಕ್ರಮ ಸಂಬಂಧವಿತ್ತು. ಆರೋಪಿಯು ರಾತ್ರಿ ವೇಳೆ ಮೃತ ಬಾಲಕನ ತಾಯಿಯ ಮೊಬೈಲ್‍ಗೆ ಕರೆ ಮಾಡುತ್ತಿದ್ದು, ಆಕೆ ಮಕ್ಕಳಿದ್ದಾರೆ. ನಿನ್ನ ಫೋನ್ ಎತ್ತುವುದಿಲ್ಲ ಎಂದು ತಿರಸ್ಕರಿಸಿದಾಗ ನಿನ್ನ ಮಕ್ಕಳನ್ನು ಕೊಂದು ಹಾಕುವುದಾಗಿ ಬೆದರಿಕೆ ಹಾಕಿ ಮಾರನೆ ದಿನವೇ ಶಾಲೆಯಲ್ಲಿ ಮಧ್ಯಾಹ್ನದ ಊಟದ ಸಮಯದಲ್ಲಿ ಚಾಕಲೇಟ್ ನೀಡಿ ಬಾಲಕನನ್ನು ಕರೆದುಕೊಂಡು ಹೋಗಿ ಹೊಡೆದು ಉಸಿರುಗಟ್ಟಿಸಿ ಕೊಲೆ ಮಾಡಿ ಶವವನ್ನು ಅಜ್ಜಿ ಮನೆಯ ಹಿಂಭಾಗದ ಬೇಲಿಯ ಬಳಿ ಎಸೆದು ಹೋಗಿದ್ದ. ಮೃತ ಬಾಲಕನ ತಾಯಿ ರಮಾದೇವಿಗೆ ಎರಡು ಗಂಡು ಮಕ್ಕಳಿದ್ದು, ಆರೋಪಿಯು ಆ ಮಗುವನ್ನು ಕರೆತರಲು ಬೇಡರ ಅಗ್ರಹಾರದಲ್ಲಿದ್ದ ಅಂಗನವಾಡಿಗೆ ಹೋಗಿದ್ದ ಅದೃಷ್ಟವಶಾತ್ ಆ ಮಗವು ಅಂಗನವಾಡಿ ಕೇಂದ್ರದಲ್ಲಿ ನಿದ್ದೆ ಮಾಡುತ್ತಿದ್ದು, ಅದನ್ನು ಕೊಲೆ ಮಾಡುವ ಸಂಚಿನಿಂದ ವಿಫಲನಾಗಿರುವುದಾಗಿ ತಿಳಿದು ಬಂದಿದೆ. ಮಧುಗಿರಿ ಡಿವೈಎಸ್ಪಿ ಕಲ್ಲೇಶಪ್ಪ ಮಾರ್ಗದರ್ಶನದಲ್ಲಿ ಕೊರಟಗೆರೆ ಸಿಪಿಐ ಮುನಿರಾಜು ಹಾಗೂ ಕೋಳಾಲ ಪಿಎಸ್ಐ ಸಂತೋಷ್‍ಕುಮಾರ್ ಮತ್ತವರ ತಂಡ ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: