ಕರ್ನಾಟಕಪ್ರಮುಖ ಸುದ್ದಿ

ರಾಜ್ಯಕ್ಕೆ ಬಂಡವಾಳ ಸೆಳೆಯಲು ಅಮೆರಿಕ ಪ್ರವಾಸ ಕೈಗೊಳ್ಳಲಿದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಜುಲೈ 6 : ಕರ್ನಾಟಕದಲ್ಲಿ ಬಂಡವಾಳ ಹೂಡುವಂತೆ ಉದ್ಯಮಿಗಳ ಮನವೊಲಿಸಲು ಸಿಎಂ ಸಿದ್ದರಾಮಯ್ಯ ಅವರು ಮುಂದಿನ ಸೆಪ್ಟಂಬರ್ ತಿಂಗಳಲ್ಲಿ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಟೆಕ್ಸಾಸ್‍ನ ದಲ್ಲಾಸ್‍ನಲ್ಲಿ ಸೆಪ್ಟೆಂಬರ್ 1ರಿಂದ ಮೂರು ದಿನಗಳ ಕಾಲ ನಡೆಯುವ ಉತ್ತರ ಅಮೆರಿಕ ವಿಶ್ವ ಕನ್ನಡ ಒಕ್ಕೂಟ -ನಾವಿಕ ಉತ್ಸವದಲ್ಲಿ ಭಾಗವಹಿಸಲಿರುವ ಮುಖ್ಯಮಂತ್ರಿಗಳು ಅಲ್ಲಿನ ಹೂಡಿಕೆದಾರರಿಗೆ ರಾಜ್ಯದ ಪ್ರಸಸ್ತ ವಾತಾವರಣದ ಬಗ್ಗೆ ಮನವರಿಕೆ ಮಾಡಿಕೊಡಲಿದ್ದಾರೆ.

2015ರಲ್ಲಿಯೇ ಮುಖ್ಯಮಂತ್ರಿಗಳು ಈ ಉತ್ಸವದ ಉದ್ಘಾಟನೆಗೆ ಬರಬೇಕಾಗಿತ್ತು. ಪ್ರತಿಕೂಲ ಪರಿಸ್ಥಿತಿಯ ಕಾರಣದಿಂದಾಗಿ ಅವರಿಗೆ ಆಗ ಬರಲು ಸಾಧ್ಯವಾಗಿರಲಿಲ್ಲ. ಆದರೆ ಈ ವರ್ಷ ಅವರು ಬರುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಮುಖ್ಯಮಂತ್ರಿಯವರನ್ನು ಕಾರ್ಯಕ್ರಮಕ್ಕೆ ಅಧಿಕೃತವಾಗಿ ಆಹ್ವಾನಿಸಲು ನಾವಿಕ ಅಧ್ಯಕ್ಷ ಡಾ.ರೇಣುಕ ರಾಮಪ್ಪ ಮುಂದಿನ ತಿಂಗಳು ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂದು ಸಂಘಟನೆಯ ಮೂಲಗಳು ತಿಳಿಸಿವೆ.

ಯಾವುದೇ ತುರ್ತು ಸಂದರ್ಭಗಳು ಎದುರಾಗದಿದ್ದರೆ ಈ ಬಾರಿ ಬಾರದಿದ್ದರೆ ಮುಖ್ಯಮಂತ್ರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಮೆರಿಕಾಕ್ಕೆ ತೆರಳಲಿದ್ದಾರೆ. ಮುಖ್ಯಮಂತ್ರಿಯವರ ವಿಮಾನ ಪ್ರಯಾಣ ಮತ್ತು ವಸತಿ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸುವುದಿಲ್ಲ ಎಂದು ಸಿಎಂ ಕಚೇರಿ ಮೂಲಗಳು ಕೂಡ ಸ್ಪಷ್ಟಪಡಿಸಿವೆ.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಬಳಿಕ ಕೈಗೊಳ್ಳುತ್ತಿರುವ ಮೊದಲ ಅಮೆರಿಕ ಪ್ರವಾಸ ಇದಾಗಿದ್ದು, ಸಿಎಂ ಜೊತೆ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರೂ ಕೂಡ ಅಮೆರಿಕಕ್ಕೆ ತೆರಳಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.

-ಎನ್.ಬಿ.

Leave a Reply

comments

Related Articles

error: