ಕರ್ನಾಟಕಪ್ರಮುಖ ಸುದ್ದಿ

ಶಿವಮೊಗ್ಗ ಡಿಸಿಸಿ ಬ್ಯಾಂಕ್ ನ ಪರವಾನಗಿ ರದ್ದು ಪಡಿಸುವಂತೆ ಭಾರತೀಯ ರಿರ್ಸವ್ ಬ್ಯಾಂಕ್ ಗೆ ಶಿಫಾರಸ್ಸು

ಬೆಂಗಳೂರು,ಜು.6-ವೃತ್ತಿಪರ ಬ್ಯಾಂಕಿಂಗ್ ವ್ಯವಸ್ಥೆಗೆ ತಿಲಾಂಜಲಿಯಿಟ್ಟು ಅಕ್ರಮಗಳನ್ನೇ ಎಸಗಿರುವ ಶಿವಮೊಗ್ಗ ಡಿಸಿಸಿ ಬ್ಯಾಂಕ್ನ ಪರವಾನಗಿ ರದ್ದು ಪಡಿಸುವಂತೆ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ (ನಬಾರ್ಡ್) ಭಾರತೀಯ ರಿರ್ಸವ್ ಬ್ಯಾಂಕ್ ಗೆ ಶಿಫಾರಸ್ಸು ಮಾಡಿದೆ.

ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಹಕಾರ ವಲಯದ ಬ್ಯಾಂಕ್ನ ಮಾನ್ಯತೆ ರದ್ದು ಪಡಿಸುವಂತೆ ಶಿಫಾರಸ್ಸು ಮಾಡಿದೆ. ಅಕ್ರಮಗಳನ್ನೇ ಹಾಸು ಹೊದ್ದಿರುವ ಡಿಸಿಸಿ ಬ್ಯಾಂಕ್‌ನ ಪುನಶ್ಚೇತನಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಬ್ಯಾಂಕಿಂಗ್ ವ್ಯವಸ್ಥೆಗೆ ಇದೊಂದು ಕಪ್ಪು ಚುಕ್ಕೆ ಎಂದು ನಬಾರ್ಡ್ ತೀವ್ರ ಕಳವಳ ವ್ಯಕ್ತಪಡಿಸಿದೆ.

ಭಾರೀ ಅಕ್ರಮ ಎಸಗಿರುವ ಶಿವಮೊಗ್ಗ ಡಿಸಿಸಿ ಬ್ಯಾಂಕ್ ವಿರುದ್ಧ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ನಬಾರ್ಡ್ನ ಮುಖ್ಯ ಪ್ರಧಾನ ವ್ಯವಸ್ಥಾಪಕ ಕೆ.ವೆಂಕಟೇಶ್ವರರಾವ್ ಜೂ.೨೧ ರಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಕುಂಟಿ ಅವರಿಗೆ ಪತ್ರ ಬರೆದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

ಡಿಸಿಸಿ ಬ್ಯಾಂಕ್ ನಲ್ಲಿ ಸಮರ್ಪಕವಾಗಿ ಬಂಡವಾಳ ಪುನರ್ ಸ್ಥಾಪನೆ ಯೋಜನೆ ಅನುಷ್ಠಾನಗೊಳಿಸಿಲ್ಲ. ಬಂಡವಾಳವನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ. ಈ ಬಗ್ಗೆ ಆರ್.ಬಿ.ಐಗೆ ಪತ್ರ ಬರೆದು ಮಾನ್ಯತೆ ರದ್ದುಪಡಿಸುವುದಾಗಿ ನಬಾರ್ಡ್ ಎಚ್ಚರಿಕೆ ನೀಡಿತ್ತು.  ಭಾರೀ ಅಕ್ರಮಗಳ ಹಿನ್ನೆಲೆಯಲ್ಲಿ ನಬಾರ್ಡ್ ೨೦೧೬ರ ಮಾ.೩೧ ರಂದು ಶಿವಮೊಗ್ಗ ಡಿಸಿಸಿ ಬ್ಯಾಂಕ್‌ನಲ್ಲಿ ಶಾಸನ ಬದ್ಧವಾಗಿ ಪರಿಶೀಲನೆ ನಡೆಸಿತ್ತು. ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯಂತೆ ಡಿಸಿಸಿ ಬ್ಯಾಂಕ್ ಕಾರ್ಯನಿರ್ವಹಿಸಿಲ್ಲ. ಹಣಕಾಸು ಸಂಸ್ಥೆಗಳ ಆರ್ಥಿಕ ಶಿಸ್ತು ಕಾಪಾಡುವ ೨೦೦೭ರ ಆರ್.ಬಿ.ಐ ಮಾರ್ಗಸೂಚಿಯನ್ನು ಈ ಬ್ಯಾಂಕ್ ಧಿಕ್ಕರಿಸಿದೆ. ಹಣಕಾಸು ಸಂಸ್ಥೆಗಳು ಬಂಡವಾಳದ ಶೇ.೭ರಷ್ಟು ನಗದು (ಸಿ.ಆರ್.ಎ.ಆರ್) ವ್ಯವಸ್ಥೆ ಹೊಂದಿರಬೇಕು. ಆದರೆ ಡಿಸಿಸಿ ಬ್ಯಾಂಕ್‌ಗಳು ಶೇ.೯ರಷ್ಟು ಸಿ.ಆರ್.ಎ.ಆರ್ ಹೊಂದಿರಬೇಕಾಗುತ್ತದೆ. ಆದರೆ ಈ ವ್ಯವಸ್ಥೆ ಈ ಬ್ಯಾಂಕ್‌ನಲ್ಲಿ ಹಣಕಾಸು ನಿರ್ವಹಣೆ ಪಾತಾಳಕ್ಕಿಳಿದಿದೆ. ಇದು ಋಣಾತ್ಮಕವಾಗಿ ಅಂದರೆ ಶೇ.೧.೨೯ಕ್ಕೆ ಕುಸಿತವಾಗಿದೆ.

ಅನುತ್ಪಾದಕ ಆಸ್ತಿ ಅತಿ ಹೆಚ್ಚು ಅಂದರೆ ಶೇ.೧೨.೮ ರಷ್ಟಿದೆ. ನಕಲಿ ಆಭರಣ ಅಡವಿಟ್ಟು ಬ್ಯಾಂಕ್‌ಗೆ ೬೧.೫೯ ಕೋಟಿ ರೂ. ವಂಚಿಸಿದ್ದು, ಈ ಬಗ್ಗೆಯೂ ಕ್ರಮ ತೆಗೆದುಕೊಂಡಿಲ್ಲ ಎಂದು ನಬಾರ್ಡ್ ಆಕ್ಷೇಪ ವ್ಯಕ್ತಪಡಿಸಿದೆ. ಬಿ.ಆರ್. ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿದ್ದು, ಪ್ರಸ್ತುತ ಮತ್ತು ಭವಿಷ್ಯದ ಠೇವಣಿದಾರರ ಹಿತ ರಕ್ಷಣೆ ಕಾಪಾಡುವ ವಿಚಾರದಲ್ಲಿ ಬ್ಯಾಂಕ್ ಪ್ರಾಮಾಣಿಕವಾಗಿಲ್ಲ. ವೃತ್ತಿಪರ ಬ್ಯಾಂಕಿಂಗ್ ನಿರ್ವಹಣೆಯಲ್ಲಿ ಸೋತಿದೆ. ಅಗತ್ಯವಾದ ಬ್ಯಾಂಕಿಂಗ್ ನಿಯಂತ್ರಣ ವಿಷಯದಲ್ಲಿ ಸೂಕ್ಷ್ಮತೆ ಕಳೆದುಕೊಂಡಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದೆ.

ಹೀಗಾಗಿ ರಾಜ್ಯ ಮಟ್ಟದ ಬ್ಯಾಂಕಿಂಗ್ ಪ್ರಗತಿ ಪರಿಶೀಲನೆ ನಡೆಸುವ ಜವಾಬ್ದಾರಿ ಹೊಂದಿರುವ ನೀವು, ಇದನ್ನು ಗಂಭೀವಾಗಿ ಪರಿಗಣಿಸಬೇಕು. ಬ್ಯಾಂಕ್‌ನಲ್ಲಿ ಬಂಡವಾಳವನ್ನು ಕಾಲಮಿತಿಯೊಳಗೆ ಮರು ಸ್ಥಾಪಿಸುವ ಬಗ್ಗೆ ಅಗತ್ಯ ಕ್ರಿಯಾಯೋಜನೆ ರೂಪಿಸಬೇಕೆಂದು ಮುಖ್ಯ ಕಾರ್ಯದರ್ಶಿ ಅವರಿಗೆ ನಬಾರ್ಡ್ ಕಿವಿ ಮಾತು ಹೇಳಿದೆ. (ವರದಿ-ಎಸ್.ಎನ್, ಎಂ.ಎನ್)

 

Leave a Reply

comments

Related Articles

error: