ದೇಶಪ್ರಮುಖ ಸುದ್ದಿ

ಎಲ್‍ಪಿಜಿಯಂತೆ ರೈಲ್ವೆ ಟಿಕೆಟ್‍ ಸಬ್ಸಿಡಿಯನ್ನೂ ತ್ಯಜಿಸುವಂತೆ ಅಭಿಯಾನ ಆರಂಭಿಸುತ್ತಾ ಕೇಂದ್ರ?

ನವದೆಹಲಿ, ಜುಲೈ 6 : ಉಳ್ಳವರು ಅಡುಗೆ ಅನಿಲ ಸಬ್ಸಿಡಿಯನ್ನು ಸ್ವಯಂಪ್ರೇರಿತರಾಗಿ ತ್ಯಜಿಸಬೇಕೆಂದು ಕೇಂದ್ರ ಸರ್ಕಾರ ಕೈಗೊಂಡ ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರೆತು ಕೋಟ್ಯಂತರ ಮಂದಿ ಸಬ್ಸಿಡಿಯನ್ನು ತ್ಯಜಿಸಿದಂತೆ ರೈಲ್ವೇ ಟಿಕೆಟ್‍ ಮೇಲೆ ಕೇಂದ್ರ ಸರ್ಕಾರ ನೀಡುವ ಸಬ್ಸಿಡಿಯನ್ನೂ ಅನುಕೂಲಸ್ಥರು ತ್ಯಜಿಸುವಂತೆ ಅಭಿಯಾನ ಆರಂಭಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ.

ಅಡುಗೆ ಅನಿಲದಲ್ಲಿ ಸಬ್ಸಿಡಿ ಕೈಬಿಡುವಂತೆ ‘ಗಿವಿಟ್ಅಪ್’ ಅಭಿಯಾನದ ಮಾದರಿಯಲ್ಲಿ ರೈಲ್ವೆ ಇಲಾಖೆಯೂ ಅಭಿಯಾನ ನಡೆಸಲು ನಿರ್ಧರಿಸಿದೆ. ಮುಂದಿನ ತಿಂಗಳು ಈ ಅಭಿಯಾನ ಆರಂಭವಾಗಲಿದ್ದು, ರೈಲ್ವೆ ಟಿಕೆಟ್ ದರದಲ್ಲಿ ಸರಕಾರ ನೀಡುವ ಸಬ್ಸಿಡಿಯನ್ನು ಕೈಬಿಡುವಂತೆ ರೈಲ್ವೆ ಇಲಾಖೆಯು ಸಾರ್ವಜನಿಕರಿಗೆ ಮನವಿ ಮಾಡಲಿದೆ.

ಭಾರತೀಯ ರೈಲ್ವೆ ಟಿಕೆಟ್‍ಗಳಲ್ಲಿ ಪ್ರಯಾಣಿಕರಿಗೆ ಶೇ.43ರಷ್ಟು ವಿನಾಯಿತಿ ಇದೆ. ಅಂದರೆ ಪ್ರಯಾಣಿಕರು 57% ಹಣವನ್ನು ಮಾತ್ರ ಪಾವತಿಸುತ್ತಿದ್ದಾರೆ. ಉಳಿದ ಹಣವನ್ನು ಇಲಾಖೆಯೇ ಭರಿಸುತ್ತದೆ. ಹೀಗಾಗಿ ಸಬ್ಸಿಡಿ ನೀಡುವುದರಿಂದ ರೈಲ್ವೆ ಇಲಾಖೆಗೆ ಪ್ರತಿವರ್ಷ 30 ಸಾವಿರ ಕೋಟಿ ರೂಪಾಯಿಯಷ್ಟು ಆದಾಯ ಖೋತಾ ಆಗುತ್ತಿದೆ. ಈ ಆದಾಯ ಖೋತಾವನ್ನು ತಡೆಯಲು ಎಲ್‍ಪಿಜಿ ಸಬ್ಸಿಡಿ ತ್ಯಜಿಸುವ ‘ಗಿವ್ ಇಟ್ ಅಪ್’ ಯೋಜನೆಯಂತೆ ರೈಲ್ವೆ ಇಲಾಖೆಯು ಪ್ರಯಾಣಿಕರಿಗೆ ಸದ್ಯಕ್ಕೆ 50% ಮತ್ತು 100% ಸಬ್ಸಿಡಿ ಬಿಟ್ಟುಕೊಡುವ ಎರಡು ಆಯ್ಕೆಗಳನ್ನು ಮೊದಲ ಹಂತದಲ್ಲಿ ನೀಡಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಮೊದಲಿಗೆ ಈ ಅಭಿಯಾನ ಐಷಾರಾಮಿ ರೈಲುಗಳಾದ ರಾಜಧಾನಿ, ಶತಾಬ್ದಿಯಂತ ರೈಲುಗಳಲ್ಲಿ ಜಾರಿಗೆ ಬರಬಹುದು. ಬಳಿಕ ಅದು ಸಬ್’ಅರ್ಬನ್ ರೈಲುಗಳಿಗೂ ವಿಸ್ತರಣೆಯಾಗಲಿದ್ದು, ಹಂತಹಂತವಾಗಿ ಸಬ್ಸಿಡಿ ಕೈಬಿಡಲು ರೈಲ್ವೆ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.

-ಎನ್.ಬಿ.

Leave a Reply

comments

Related Articles

error: