ಮೈಸೂರು

ಜೆಡಿಎಸ್ ಪಕ್ಷದಲ್ಲಿ ಹಲವಾರು ವರ್ಷಗಳಿಂದ ದುಡಿದ ಪ್ರಾಮಾಣಿಕ ಕಾರ್ಯಕರ್ತರಿಗೆ ನ್ಯಾಯ ಸಿಗುತ್ತಿಲ್ಲ : ಪ್ರಜ್ವಲ್ ರೇವಣ್ಣ ವಿಷಾದ

ಮೈಸೂರು, ಜು.6:- ನಮ್ಮ ಜೆಡಿಎಸ್ ಪಕ್ಷದಲ್ಲಿ ಒಂದು ರೋಗವಿದೆ, ನಿಷ್ಠೆ ಪ್ರಾಮಾಣಿಕತೆಯಿಂದ ದುಡಿಯವವರಿಗೆ ಕೊನೆ ಬೆಂಚಿನ ಸೀಟು ನೀಡುತ್ತಾರೆ. ಸೂಟ್‍ಕೇಸ್‍ನೊಂದಿಗೆ ಬಂದವರಿಗೆ ಮುಂಭಾಗದ ಸೀಟು ನೀಡುತ್ತಾರೆ ಇದು ನಿಲ್ಲಬೇಕಿದೆ ಎಂದು ಜೆಡಿಎಸ್ ಯುವಮುಖಂಡ ಪ್ರಜ್ವಲ್ ರೇವಣ್ಣ ವಿಷಾದ ವ್ಯಕ್ತಪಡಿಸಿದರು.

ಪಟ್ಟಣದ ಗೌರಮ್ಮಪುಟ್ಟಸ್ವಾಮಪ್ಪ ಕಲ್ಯಾಣಮಂಟಪದಲ್ಲಿ ಆಯೋಜಿಸಿದ್ದ ಜನತಾದಳ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು ಜೆಡಿಎಸ್ ಪಕ್ಷದಲ್ಲಿ ಹಲವಾರು ವರ್ಷಗಳಿಂದ ದುಡಿದ ಪ್ರಾಮಾಣಿಕ ಕಾರ್ಯಕರ್ತರಿಗೆ ನ್ಯಾಯ ಸಿಗದೆ ಕೊನೆ ಬೆಂಚಿನಲ್ಲೆ ಉಳಿಯುತ್ತಿದ್ದಾರೆ. ಸೂಟ್‍ಕೇಸ್‍ನೊಂದಿಗೆ ಬಂದವರಿಗೆ  ರಾಜಕೀಯ ಸ್ಥಾನ ಮಾನ ನೀಡುತ್ತಿರುವುದು ಕೊನೆಗಾಣಬೇಕು ಎಂದರು. ನನಗೆ ಯಾವುದೇ ಜಾತಿ,ಮತ ತಿಳಿದಿಲ್ಲ. ಆದರೆ ನಿಮ್ಮ ಪ್ರೀತಿ ಅರಿತಿದ್ದೇನೆ. ಕಳೆದ 10 ವರ್ಷದಿಂದ ಪಕ್ಷಕ್ಕೆ ಅಧಿಕಾರ ಸಿಕ್ಕಿಲ್ಲ. ಎಲ್ಲರೂ ಒಂದಾಗಿ ದುಡಿಯೋಣ. ಕುಮಾರಣ್ಣನನ್ನು ಮುಖ್ಯಮಂತ್ರಿಯನ್ನಾಗಿಸೋಣ. ನನ್ನ ಅಜ್ಜ, ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಕುಟುಂಬ ರಾಜ್ಯಾದ್ಯಂತ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಿದಲ್ಲಿ ಗೆಲುವು ನಮ್ಮದೇ ಎಂದರು.

ಕಳೆದ ನಾಲ್ಕೈದು ತಿಂಗಳಿನಿಂದ ಹುಣಸೂರು ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗುವ ಬಯಕೆಯಿಂದ ನಾನು ತಾಲೂಕಿನಲ್ಲಿ ಜನರೊಂದಿಗೆ ಬೆರೆತು ಸಮಸ್ಯೆಗಳನ್ನು ತಿಳಿಯುವ ಪ್ರಯತ್ನ ನಡೆಸಿದ್ದೇನೆ. ಪಕ್ಷವನ್ನು ರಾಜ್ಯಾದ್ಯಂತ ಸಂಘಟಿಸಬೇಕೆನ್ನುವುದು ನಮ್ಮ ಉದ್ದೇಶ. ಈ ನಿಟ್ಟಿನಲ್ಲಿ ಹುಣಸೂರು ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಿ ಈಗಲೂ ಸ್ಪರ್ಧಿಸ ಬಯಸಿದ್ದೇನೆ. ಹಾಗೆಂದ ಮಾತ್ರಕ್ಕೆ ಪಕ್ಷವನ್ನು ಹೋಳಾಗಿಸುವ, ಬಂಡಾಯದ ಹೊಗೆ ಹೊತ್ತಿಸುವ ಕಾರ್ಯ ನಡೆಸಿಲ್ಲ. ಪಕ್ಷದ ಹೈಕಮಾಂಡ್ ಹಾಗೂ ನನ್ನ ಅಜ್ಜ ಎಚ್.ಡಿ.ದೇವೇಗೌಡ ನನಗೆ ರಾಜಕೀಯ ಆಶೀರ್ವಾದ ನೀಡಿಲ್ಲ. ಆದರೆ ಪಕ್ಷ ಸಂಘಟನೆಗೆ ನನ್ನನ್ನು ತಡೆದಿಲ್ಲ. ಅವರ ರಾಜಕೀಯ ಅನುಭವದ ಮುಂದೆ ನಾವೆಲ್ಲಾ ಏನೂ ಅಲ್ಲ. ನಾನು ಅಭ್ಯರ್ಥಿಯಾಗಲೀ ಇಲ್ಲದಿರಲಿ ಪಕ್ಷದ ಹಿತ ಕಾಯುತ್ತೇನೆ. ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ. ಅದಕ್ಕೆ ನಾನು ತಲೆಬಾಗುತ್ತೇನೆ ಎಂದರು.

4 ವರ್ಷಗಳ ಹಿಂದೆ ಪಕ್ಷಕ್ಕೆ ಮರು ಸೇರ್ಪಡೆ ಸಂದರ್ಭದಲ್ಲಿ ಯಾವ ಕುಟುಂಬದ ಸದಸ್ಯರು ಅವರಿಗೆ ಬೆಂಬಲವಾಗಿ ನಿಂತು ಬರಮಾಡಿಕೊಂಡರು ಅದು ನನಗೆ ಗೊತ್ತಿದೆ. ಇನ್ನೊಬ್ಬ ಮುಖಂಡ 4 ವರ್ಷಗಳ ಹಿಂದೆ ಯಾರೂ ಕೇಳದ ಸ್ಥಿತಿಯಲ್ಲಿ ಮನೆ ಸೇರಿ ರಾಜಕೀಯ ಸನ್ಯಾಸತ್ವ ಸ್ವೀಕರಿಸಲು ಸಿದ್ದರಾಗಿದ್ದಾಗ ಪಕ್ಷಕ್ಕೆ ಯಾರು ಕರೆತಂದವರೆಂಬುದನ್ನು ತಿಳಿಯಲಿ ಎಂದು ಜಿಡಿಎಸ್ ಜಿಲ್ಲಾ ನಾಯಕರಿಗೆ ಟಾಂಗ್ ನೀಡಿದರು. ಹುಣಸೂರಿಗೆ ಬರುವಂತೆ ಕೆಲವರು ಅಂಗಲಾಚಿದ್ದು ಉಂಟು ಈಗ ಅವರು ಎಲ್ಲಿ ಹೋದರು ಆ ದೇವರೆ ಬಲ್ಲ, ಆದರೆ ಮುಳ್ಳಿನ ಮೇಲಿರುವ ಹೂವುಗಳು ಮತ್ತು ದೂರದ ಬೆಟ್ಟ ಹತ್ತಿರಕ್ಕೆ ಹೋದಾಗ ಕಾಣುತ್ತೆ  ಎಂಬ ನಿದರ್ಶನ ಎರಡು ಪಕ್ಷಗಳಲ್ಲೂ ಒಂದೊಂದು ಕಾಲಿಟ್ಟುಕೊಂಡು ಎರಡೂ ಕಡೆ ಒಳ್ಳೆಯವರಾಗಲು ಪ್ರಯತ್ನಿಸುತ್ತಿರುತ್ತಾರೆ ಎಂದು ಛೇಡಿಸಿದರು. ಜೆಡಿಎಸ್ ಮುಖಂಡ ಹಾಗೂ ದೇವರಾಜು ಅರಸು ಅಭಿಮಾನಿಗಳ ಬಳಗದ ಅಧ್ಯಕ್ಷ ರಾಜು ಬಿಳಿಕೆರೆ ಮಾತನಾಡಿ, ಪ್ರಜ್ವಲ್ ರೇವಣ್ಣ ಅವರು ಮೊದಲ ಬಾರಿಗೆ ನಮ್ಮ ಮನೆಗೆ ಬರುತ್ತೇವೆ ಎಂದಾಗ, ನಾನು ನಿರಾಕರಿಸಿ, ಜಿಲ್ಲಾ ನಾಯಕರನ್ನು ಭೇಟಿ ಮಾಡಿ ಅವರ ಸಹಕಾರದೊಂದಿಗೆ ಹುಣಸೂರಿಗೆ ಬನ್ನಿ ಎಂದು ಹೇಳಿದ್ದೇ, ಆದರೆ ಸ್ವತ: ಮಾಜಿ ಸಚಿವ ರೇವಣ್ಣ  ಅವರು ನನ್ನ ಜೊತೆಯಲ್ಲಿ ದೂರವಾಣಿ ಮೂಲಕ ಮಾತನಾಡಿ ನನ್ನ ಮಗನನ್ನು ಹುಣಸೂರು ಕ್ಷೇತ್ರದಲ್ಲಿ ಪ್ರವಾಸ ಮಾಡಿಸಿ, ಪಕ್ಷ ಸಂಘಟನೆ ಮಾಡಿಸಿ, ವರಿಷ್ಟರ ಜೊತೆ ಚರ್ಚಿಸಿ ಅಭ್ಯರ್ಥಿಯ ಆಯ್ಕೆಯನ್ನು ಮಾಡಲಾಗುತ್ತದೆ ಎಂದು ಹೇಳಿದ ಬಳಿಕ ತಾಲೂಕಿನಲ್ಲಿ ಪಕ್ಷದ ಕಾರ್ಯಕರ್ತರನ್ನು ಕೇಳುವವರಿಲ್ಲ.ಇಂತಹ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ನಮಗೆ ಆಸರೆಯಾಗಿ ಬಂದಿದ್ದಾರೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಗೆಲುವು ಸಾಧಿಸೋಣ. ಪ್ರಜ್ವಲ್ ಹೇಳಿದಂತೆ ನಾನು ಕೆಲಸ ಮಾಡುತ್ತೇನೆ.ನಾವು ಯಾವುದೇ ಬಂಡಾಯದ ಬಾವುಟ ಹಾರಿಸುತ್ತಿಲ್ಲ. ಅಭ್ಯರ್ಥಿ ಆಯ್ಕೆಯ ವಿಚಾರಕ್ಕೆ ಸಂಬಂಧಸಿದಂತೆ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗೋಣವೆಂದರು.

ಗೊಂದಲದ ಗೂಡಾದ ಸಭೆ

ಇದು ಪಕ್ಷದ ಸಮಾವೇಶವೇ ಅಥವಾ ಅರಸು ಬಳಗದ ಸಮಾವೇಶವೇ ಎನ್ನುವ ಗೊಂದಲ ನೆರೆದಿದ್ದವರಲ್ಲಿ ಮೂಡಿತ್ತು. ಕಾರಣ ವೇದಿಕೆಯಲ್ಲಿ ಭಾಷಣ ಮಾಡಿದ ಕೆಲಮುಖಂಡರು ದೇವರಾಜ ಅರಸು ಅಭಿಮಾನಿ ಬಳಗವನ್ನು ಯಾವುದೇ ಪಕ್ಷಕ್ಕೆ ಗುತ್ತಿಗೆ ನೀಡಿಲ್ಲ. ಅರಸರ ತತ್ವಾದರ್ಶಗಳನ್ನು ಪಾಲಿಸುವವರಿಗೆ ಬೆಂಬಲ ನೀಡುತ್ತೇವೆ ಎಂದಾಗ ನೆರೆದಿದ್ದವರು ಇದು ಯಾವ ಸಮಾವೇಶವೆಂದು ಗೊಂದಲಕ್ಕೊಳಗಾದರು. ಮುಖಂಡರಾದ ಪೆಂಜಳ್ಳಿ ರಾಮೇಗೌಡ, ವರದರಾಜು, ಜಯಣ್ಣ, ಲೋಕೇಶ್, ನಾಗೇಶ್, ರಮೇಶ್ ಮಾತನಾಡಿದರು. ನಗರಸಭಾ ಸದಸ್ಯ ಯೋಗಾನಂದ್, ಹರವೆ ಶಿವಣ್ಣ, ಬಾಬುಸಾಹೇಬ್, ಸುರೇಶ್ ಇತರರು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: