ಸುದ್ದಿ ಸಂಕ್ಷಿಪ್ತ

ಶರತ್ ಕೊಲೆ ಯತ್ನ : ಮಡಿವಾಳರ ಸಂಘ ಖಂಡನೆ : ಇಂದು ಜಿಲ್ಲಾಧಿಕಾರಿಗಳಿಗೆ ಮನವಿ

ಮಡಿಕೇರಿ, ಜು.6 : ಇತ್ತೀಚೆಗೆ ಬಿ.ಸಿ.ರೋಡ್ ನಲ್ಲಿ ಮಡಿವಾಳರ ಸಂಘ ದ ಕಾರ್ಯಕರ್ತ, ಉದಯ ಲಾಂಡ್ರಿಯ ಶರತ್ ಎಂಬುವವರ ಕೊಲೆ ಯತ್ನ ನಡೆದಿರುವುದನ್ನು ಖಂಡಿಸುವುದಾಗಿ ತಿಳಿಸಿರುವ ಕೊಡಗು ಜಿಲ್ಲಾ ಮಡಿವಾಳರ ಸಂಘ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದೆ.

ಪತ್ರಿಕಾ ಹೇಳಿಕೆ ನೀಡಿರುವ ಸಂಘದ ಅಧ್ಯಕ್ಷರಾದ ಎಂ.ಡಿ.ನಂಜಪ್ಪ ಹಾಗೂ ಪ್ರಧಾನ ಕಾರ್ಯದರ್ಶಿ ಪಿ.ಜಿ.ಮಂಜುನಾಥ್, ಘಟನೆಯನ್ನು ಖಂಡಿಸಿ ಜು.7 ರಂದು ಬೆಳಗ್ಗೆ 11 ಗಂಟೆಗೆ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದೆಂದು ತಿಳಿಸಿದ್ದಾರೆ.  ಬೈಕ್‍ನಲ್ಲಿ ಬಂದ ಮೂವರು ದುಷ್ಕರ್ಮಿಗಳಿಂದ ಮಾರಣಾಂತಿಕವಾಗಿ ಇರಿತಕ್ಕೊಳಗಾಗಿರುವ ಶರತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತ್ತಿದ್ದಾರೆ. ತಕ್ಷಣ ಪೊಲೀಸರು ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಶರತ್ ಕುಟುಂಬಕ್ಕೆ ಸರಕಾರ 5 ಲಕ್ಷ ರೂ. ಪರಿಹಾರವನ್ನು ನೀಡಿ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಭರಿಸಬೇಕು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಘಟನೆಯನ್ನು ತಪ್ಪಾಗಿ ಪ್ರತಿಬಿಂಬಿಸುತ್ತಿರುವವರನ್ನು ಬಂಧಿಸಬೇಕೆಂದು ಕೂಡ ಒತ್ತಾಯಿಸುವುದಾಗಿ ಎಂ.ಡಿ.ನಂಜಪ್ಪ ಹಾಗೂ ಪ್ರಧಾನ ಕಾರ್ಯದರ್ಶಿ ಪಿ.ಜಿ.ಮಂಜುನಾಥ್ ತಿಳಿಸಿದ್ದಾರೆ. (ವರದಿ:ಕೆಸಿಐ, ಎಲ್.ಜಿ)

Leave a Reply

comments

Related Articles

error: