ಕರ್ನಾಟಕ

ಅಡ್ಡ4ಪ್ಲಾಂಟಸ್’ ಆ್ಯಪ್‍ನ ಬಳಕೆಗೆ ಚಾಲನೆ : ಬೆಳೆಗಾರರಿಗೆ ಸ್ಪಂದನೆ

ಮಡಿಕೇರಿ ಜು.6 : ಕೊಡಗು ಜಿಲ್ಲಾ ವ್ಯಾಪ್ತಿಯ ಕಾಫಿ ಬೆಳೆ ಸೇರಿದಂತೆ ವಿವಿಧ ಪ್ಲಾಂಟೇಷನ್ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಬೆಳೆಗಾರರಿಗೆ  ನ್ಯಾಯಯುತವಾದ ಧಾರಣೆ ಒದಗಿಸಿಕೊಡುವುದು ಮತ್ತು ಕೃಷಿ ಚಟುವಟಿಕೆಗಳಿಗೆ ಪೂರಕವಾದ ಮಾಹಿತಿ ಹಾಗೂ ಮಾರಾಟ ವ್ಯವಸ್ಥೆಯನ್ನು ಕಲ್ಪಿಸುವ ‘ಅಡ್ಡ4ಪ್ಲಾಂಟಸ್’ ಎನ್ನುವ ಆ್ಯಪ್‍ನ ಬಳಕೆಗೆ ಚಾಲನೆ ನೀಡಲಾಗಿದೆ.

ಜಿಲ್ಲೆಯ ಬೆಳೆಗಾರರ ಅನುಕೂಲಕ್ಕಾಗಿ ಜಿಲ್ಲೆಯವರಾದ ಮಾಚಯ್ಯ ಕೆ.ಪಿ.ಸಜ್ಜುಗೊಳಿಸಿರುವ ನೂತನ ಆ್ಯಪ್‍ನ್ನು ಕೃಷಿ ವಿಶ್ವ ವಿದ್ಯಾನಿಲಯದ ವಿಶ್ರಾಂತ ಉಪ ಕುಲಪತಿಗಳಾದ ಡಾ.ಪಿ.ಜಿ. ಚಂಗಪ್ಪ ಬಿಡುಗಡೆ ಮಾಡಿದರು. ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯ ಬೆಳೆಗಾರರಿಗೆ ಅವರು ಬೆಳೆದ ಕಾಫಿ, ಕರಿಮೆಣಸು, ಏಲಕ್ಕೆ ಸೇರಿದಂತೆ ವಿವಿಧ ಪ್ಲಾಂಟೇಷನ್‍ಗಳ ಬಗ್ಗೆ ಉಪಯುಕ್ತ ಮಾಹಿತಿ ನೀಡುವ ಉಪಯುಕ್ತ ಆ್ಯಪ್ ಇದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗೂಗಲ್ ಪ್ಲೇ ಸ್ಟೋರ್ ಮೂಲಕ ಡೌನ್ ಮಾಡಿಕೊಳ್ಳಬಹುದಾದ ‘ಅಡ್ಡ4ಪ್ಲಾಂಟಸ್’ ಕುರಿತು ಮಾಚಯ್ಯ ಕೆ.ಪಿ. ಮಾಹಿತಿ ನೀಡಿದರು. ಆ್ಯಪ್‍ನಲ್ಲಿ ಪ್ರಮುಖವಾಗಿ ಜಿಲ್ಲೆಯ ಕಾಫಿ, ಕರಿಮೆಣಸು ಮತ್ತು ಏಲಕ್ಕಿ ಉತ್ಪನ್ನಗಳಿಗೆ ಇರುವ ಧಾರಣೆ, ಕೃಷಿ ನಡೆಸುವ ಸ್ಥಳದ ವಾತಾವರಣ, ವಿವಿಧ ಬೆಳೆಗಳನ್ನು ಬೆಳೆಯಲು ಉಪಯೋಗಿಸುವ ಉಪಕರಣ, ಸಲಕರಣೆಗಳ ಮಾಹಿತಿಯೊಂದಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕೃಷಿ ಉತ್ಪನ್ನಗಳಿಗೆ ಇರುವ ಮಾರುಕಟ್ಟೆ ಸೌಲಭ್ಯ ಮತ್ತು ಆಯಾ ದಿನಗಳ ಧಾರಣೆ, ಸರ್ಕಾರದಿಂದ ವಿವಿಧ ಕೃಷಿಗಳಿಗೆ ಲಭ್ಯವಿರುವ ಸೌಲಭ್ಯ, ಸಹಾಯಧನಗಳ ಮಾಹಿತಿ ದೊರಕಲಿದೆ. ಮುಂಬರುವ ದಿನಗಳಲ್ಲಿ ಬೆಳೆಗಾರರ ಅನುಕೂಲತೆಗಳನ್ನು ಗಮನಿಸಿಕೊಂಡು ಆ್ಯಪ್‍ನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ತಿಳಿಸಿದರು.
ಡಿಜಿಟಲ್ ಪ್ಲಾಂಟೇಷನ್ :
ವಿವಿಧ ಪ್ಲಾಂಟೇಷನ್ ಬೆಳೆಗಳ ಮಾಹಿತಿ ಮತ್ತು ತಾವು ಬೆಳೆದ ಉತ್ಪನ್ನಗಳಿಗೆ ಸ್ಪರ್ಧಾತ್ಮಕವಾದ ಉತ್ತಮ ಧಾರಣೆಯನ್ನು ಪಡೆದುಕೊಳ್ಳಲು ಆ್ಯಪ್ ಸಹಕಾರಿಯಾಗಲಿದೆ. ಬೆಳೆಗಾರ ತನ್ನ ಬಳಿ ಇರುವ ಉತ್ಪನ್ನ ಮತ್ತು ತಾನು ಬಯಸುವ ಧಾರಣೆಯ ಬಗ್ಗೆ ಆ್ಯಪ್ ಮೂಲಕ ಮೂಲಕ ಮಾಹಿತಿ ನೀಡಬಹುದು. ಈ ಆ್ಯಪ್‍ನಲ್ಲಿ ಇರುವ ಆಸಕ್ತ ಖರೀದಿದಾರರು ಉತ್ತಮ ಧಾರಣೆಯನ್ನು ನೀಡಿ ಸ್ಥಳಕ್ಕೆ ಬಂದು ಉತ್ಪನ್ನಗಳನ್ನು ಖರೀದಿಸುವ ಅವಕಾಶವೂ ಇದೆ ಎಂದು ಮಾಚಯ್ಯ ತಿಳಿಸಿದರು. ಬೆಳೆಗಾರ ಸಮುದಾಯ ತಾವಿರುವ ಸ್ಥಳದಲ್ಲೆ ತಾವು ಕೈಗೊಂಡಿರುವ ಕೃಷಿಯನ್ನು ಮತ್ತಷ್ಟು ವ್ಯವಸ್ಥಿತವಾಗಿ ನಡೆಸಿ ಉತ್ತಮ ಧಾರಣೆಯನ್ನು ಪಡೆಯಲು ಆ್ಯಪ್ ಸಹಕಾರಿಯಾಗಿದೆ. ಈ ಪ್ರಯತ್ನದ ಮೂಲಕ ಡಿಜಿಟಲ್ ಪ್ಲಾಂಟೇಷನ್ ಪರಿಕಲ್ಪನೆ ಸಾಕಾರಗೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಯಾವುದೇ ಕೃಷಿ ಪರಿಸರವನ್ನು ಆಧರಿಸಿಕೊಂಡಿರುತ್ತದೆ. ಈ ಹಿನ್ನೆಲೆಯಲ್ಲಿ ಕೃಷಿ ಚಟುಬವಟಿಕೆಗಳಿಗೆ ಪೂರಕವಾಗಿ ಆ್ಯಪ್‍ನಲ್ಲಿ ತಮ್ಮ ಕೃಷಿ ಪ್ರದೇಶವನ್ನು ನಮೂದಿಸಿಕೊಂಡಲ್ಲಿ, ಅಲ್ಲಿನ ವಾತಾವರಣದ ಕುರಿತ ಮಾಹಿತಿ ಬೆಳೆಗಾರನಿಗೆ ಆಯಾ ಕಾಲಕ್ಕೆ ಲಭ್ಯವಾಗುತ್ತದೆ. ಇದು ಕೃಷಿ ಚಟುವಟಿಕೆಗಳನ್ನು ಯೋಜನಾಬದ್ಧವಾಗಿ ನಡೆಸಲು ಅನುಕೂಲಕರವಾಗುತ್ತದೆ ಎಂದು ಮಾಚಯ್ಯ ಹೇಳಿದರು.

ಗ್ರಾಮೀಣ ಭಾಗದ ಜನರು ಸುಲಲಿತವಾಗಿ ಬಳಸುವುದಕ್ಕೆ ಪೂರಕವಾಗಿ  ಆ್ಯಪ್‍ನ್ನು ರೂಪಿಸಲಾಗಿದ್ದು. ಇದು 2ಜಿ ನೆಟ್‍ವರ್ಕ್‍ನಲ್ಲಿಯೂ ಸಲೀಸಾಗಿ ಕಾರ್ಯನಿರ್ವಹಿಸಬಲ್ಲುದಾಗಿದೆ ಎಂದು ತಿಳಿಸಿದರು. ಉಸ್ತುವಾರಿ ಸಚಿವರ ಆಪ್ತಕಾರ್ಯದರ್ಶಿ ಕದ್ದಣಿಯಂಡ ಹರೀಶ್ ಬೋಪಣ್ಣ ಮಾತನಾಡಿ, ಅಡ್ಡ4ಪ್ಲಾಂಟಸ್ ಆ್ಯಪ್ ಜಿಲ್ಲೆಯ ಬೆಳೆಗಾರರು ದಲ್ಲಾಳಿಗಳಿಂದ ವಂಚನೆಗೆ ಒಳಗಾಗುವುದನ್ನು ತಪ್ಪಿಸಲು ಸಹಕಾರಿಯಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ನಬಾರ್ಡ್‍ನ ಕೊಡಗು ಜಿಲ್ಲಾ ಪ್ರಧಾನ ವ್ಯವಸ್ಥಾಪಕ ಎಂ.ಸಿ. ನಾಣಯ್ಯ, ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷ ಬೋಸ್ ಮಂದಣ್ಣ ಹಾಗೂ ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನ ಅಧ್ಯಕ್ಷರಾದ ಬಿ.ಡಿ.ಮಂಜುನಾಥ್ ಉಪಸ್ಥಿತರಿದ್ದರು. (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: