ಸುದ್ದಿ ಸಂಕ್ಷಿಪ್ತ
“ಭತ್ತದ ನಾಟಿ ಯಂತ್ರದ ಬಳಕೆಗೆ” ಪ್ರೋತ್ಸಾಹ
ಮಡಿಕೇರಿ, ಜು.6: ರೈತರ ಕೂಲಿಯಾಳುಗಳ ಸಮಸ್ಯೆ ನೀಗಿಸಿ, ಸಮಯಕ್ಕೆ ಸರಿಯಾಗಿ ಭತ್ತದ ನಾಟಿ ಕಾರ್ಯ ಕೈಗೊಳ್ಳಲು, ಖರ್ಚನ್ನು ಕಡಿಮೆಗೊಳಿಸಿ ಉತ್ಪಾದಕತೆ ಹೆಚ್ಚಿಸುವಂತಹ ಪರ್ಯಾಯ ಪದ್ಧತಿ ಅನಿವಾರ್ಯವಾಗಿದ್ದು, ಭತ್ತದ ಸಸಿಗಳನ್ನು ಸಕಾಲದಲ್ಲಿ ಆಳ ಮತ್ತು ಅಂತರವನ್ನು ಕಾಪಾಡಿಕೊಂಡು ನಾಟಿ ಮಾಡಿ, ಉತ್ಪಾದನಾ ವೆಚ್ಚವನ್ನು ಕಡಿಮೆಗೊಳಿಸಿ, ಇಳುವರಿ ಶೇ. 10 ರಿಂದ 15 ರವರೆಗೆ ಹೆಚ್ಚಿಸುವ ಭತ್ತದ ನಾಟಿ ಯಂತ್ರದ ಬಳಕೆ ಮಾಡಿ ನಾಟಿ ಮಾಡುವ ಪದ್ದತಿ ರೈತರಿಗೆ ವರದಾನವಾಗಿದೆ.
ನಾಟಿ ಯಂತ್ರದ ಮೂಲಕ ನಾಟಿ ಮಾಡುವ ರೈತರಿಗೆ ಪ್ರತೀ ಹೆಕ್ಟೇರಿಗೆ ರೂ. 4 ಸಾವಿರ(ಎಕ್ರೆಗೆ ರೂ.1600) ದಂತೆ ಇಲಾಖೆಯ ಮುಖಾಂತರ ಪ್ರೋತ್ಸಾಹಧನ ನೀಡಲಾಗುತ್ತಿದ್ದು, ಅರ್ಹ ಮತ್ತು ಆಸಕ್ತ ರೈತರು ಯಾಂತ್ರೀಕೃತ ಭತ್ತದ ನಾಟಿ ಮಾಡಲು ಕೋರಿದೆ. ನಾಟಿ ಯಂತ್ರ ಲಭ್ಯತೆ ಇಲಾಖೆಯ ವತಿಯಿಂದ ಮಾಡಲಾಗುತ್ತಿದ್ದು, ಹೆಚ್ಚಿನ ಮಾಹಿತಿಗೆ ಇಲಾಖೆಯ ಅಧಿಕಾರಿಗಳು, ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸುವಂತೆ ಮಡಿಕೇರಿ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ. (ವರದಿ: ಕೆಸಿಐ, ಎಲ್.ಜಿ)