ಮೈಸೂರು

ಸ್ಯಾನಿಟರಿ ಪ್ಯಾಡ್ ಗಳ ಮೇಲೆ ಹೇರಿದ ತೆರಿಗೆಯನ್ನು ತೆಗೆಯಿರಿ : ಸಹಿ ಸಂಗ್ರಯ ಅಭಿಯಾನಕ್ಕೆ ಚಾಲನೆ ನೀಡಿದ ಡಾ.ಪುಷ್ಪಾ ಅಮರನಾಥ್

ಮೈಸೂರು,ಜು.7:- ಗರ್ಭ ನಿರೋಧಕ, ಕಾಂಡೋಮ್ ಗಳು ತೆರಿಗೆ ರಹಿತವಾದರೆ, ಸ್ಯಾನಿಟರಿ ಪ್ಯಾಡುಗಳು‌ ಮಾತ್ರ ತೆರಿಗೆಗೆ ಒಳಪಟ್ಟಿವೆ. ಪ್ಯಾಡ್ ಗಳನ್ನು ಜಿ ಎಸ್ ಟಿ‌ಯಿಂದ ಹೊರಗಿಡಬೇಕು ಹಾಗೂ‌ ಬಡ ಕುಟುಂಬದ ಹೆಣ್ಣುಮಕ್ಕಳಿಗೆ‌ ಉಚಿತವಾಗಿ‌ ನ್ಯಾಪ್ಕಿನ್ ಗಳನ್ನು ಪೂರೈಸಬೇಕು‌ ಎಂದು ಒತ್ತಾಯಿಸಿ ಮಹಾರಾಣಿ ಮಹಿಳಾ ಕಾಲೇಜಿನಲ್ಲಿ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಮಾತನಾಡಿ ದೇಶದ ಅತ್ಯಂತ ಮಹತ್ವದ ತೆರಿಗೆ ಸುಧಾರಣೆ ಎನ್ನಲಾಗುತ್ತಿರುವ ಜಿ ಎಸ್ ಟಿ‌ ಯ ಅನುಷ್ಠಾನದಿಂದ ಹೆಣ್ಣುಮಕ್ಕಳು ಚಿಂತಿಸುವಂತಾಗಿದೆ.‌ ಜೀವನಾವಶ್ಯಕ ವಸ್ತುಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ ಆದರೆ ಸ್ಯಾನಿಟರಿ ಪ್ಯಾಡ್ ಗಳನ್ನು 12℅ ತೆರಿಗೆಯ ಪಟ್ಟಿಯಲ್ಲಿರಿಸಿದ್ದು ಹೆಣ್ಣುಮಕ್ಕಳು ತೊಂದರೆ ಅನುಭವಿಸುವಂತಾಗಿದೆ ಎಂದರು.

ಇನ್ನೂ ಹಲವು ಕಡೆ ಸ್ಯಾನಿಟರಿ ಉಪಕರಣಗಳನ್ನು ಬಳಸಲಾಗುತ್ತಿಲ್ಲ. ಸ್ಯಾನಿಟರಿ ಉಪಕರಣಗಳನ್ನು ಬಳಸದಿರುವುದು ಫಂಗಲ್ ಇನ್ಫೆಕ್ಷನ್, ಗರ್ಭಕೋಶದ ಸಮಸ್ಯೆಗಳಿಗೆ ಕಾರಣವಾಗಬಹುದು‌ ಎಂದು‌ ತಜ್ಞರೇ ಅಭಿಪ್ರಾಯಪಟ್ಟಿದ್ದಾರೆ. ಸ್ಯಾನಿಟರಿ ಪ್ಯಾಡ್ ಗಳು ಆರೋಗ್ಯಕರವಾಗಿದ್ದು ಅವುಗಳ ಮೇಲೆ ಹೇರಿದ ತೆರಿಗೆಯನ್ನು ತೆಗೆಯಿರಿ ಎಂದರು. ಸಾಮಾನ್ಯ ಮಹಿಳೆ ತಿಂಗಳಿಗೆ 8-10 ಪ್ಯಾಡ್ ಗಳನ್ನು ಉಪಯೋಗಿಸಬಹುದು. ಇದು ರೂ 40 ರಿಂದ ರೂ 100-150ರ ತನಕ ಇರಬಹುದು. ಇದು ನಗರ ಪ್ರದೇಶದ ಮಹಿಳೆಯರಿಗೆ ಸಾಧಾರಣ ಮೊತ್ತವಾದರೂ ಕೂಡ ಗ್ರಾಮೀಣ ಮಹಿಳೆಯರಿಗೆ ದೊಡ್ಡ ಮೊತ್ತವೇ ಆಗಿದೆ. ಋತುಚಕ್ರದ ಕುರಿತು ಗ್ರಾಮೀಣ ಪ್ರದೇಶಗಳಲ್ಲಿ ಇರುವ ಪೂರ್ವಾಗ್ರಹ ಪೀಡಿತ ಭಾವನೆಗಳು, ವೈಯಕ್ತಿಕ ಸ್ವಚ್ಛತೆಗೆ ವೆಚ್ಚ ಮಾಡಲು ಎದುರಾಗಬಹುದಾದ ವಿರೋಧ ಮಹಿಳೆಯರನ್ನು ಇಂತಹ ಆರೋಗ್ಯಕರ ಆಯ್ಕೆಗಳಿಂದ ದೂರವೇ ಇರಿಸಿದೆ. ಗರ್ಭ ನಿರೋಧಕಗಳು, ಕಾಂಡೋಮ್ ಗಳು ತೆರಿಗೆ ರಹಿತವಾಗಬಹುದಾದರೆ ಸ್ಯಾನಿಟರಿ ಪ್ಯಾಡ್ ಗಳಿಗೆ ಯಾಕೆ ತೆರಿಗೆ ಎಂದು ಪ್ರಶ್ನಿಸಿದರು. change.org, #LahuKaLagaan ಅಭಿಯಾನಗಳೊಂದಿಗೆ, ಹುಣಸೂರಿನಲ್ಲಿ ಈಗಾಗಲೇ ಸಹಿ ಸಂಗ್ರಹ ಅಭಿಯಾನವನ್ನು ಆರಂಭಿಸಿದ್ದೇವೆ. ಈಗಾಗಲೇ 5,000ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಸಹಿ‌ ಮಾಡಿದ್ದು, ದನಿ‌ ಎತ್ತಿದ್ದೇವೆ. ಇಂದು ಮಹಾರಾಣಿ ಮಹಿಳಾ ಕಾಲೇಜಿನಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಸಿದ್ದೇವೆ ಎಂದರು.

ಸಹಿ ಸಂಗ್ರಯ ಅಭಿಯಾನದಲ್ಲಿ ಕಾಲೇಜಿನ ವಿದ್ಯಾರ್ಥಿನಿಯ ಹಾಗೂ ಅಧ್ಯಾಪಕಿಯರ ವೃಂದ ಪಾಲ್ಗೊಂಡಿತ್ತು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: