
ಮೈಸೂರು
ಜೆಡಿಎಸ್ ಕಚೇರಿಗೆ ಹೆಚ್.ವಿಶ್ವನಾಥ್ ಆಗಮನ : ಆತ್ಮೀಯವಾಗಿ ಬರಮಾಡಿಕೊಂಡ ಪ್ರಮುಖರು
ಮೈಸೂರು,ಜು.7:- ಜೆಡಿಎಸ್ ಸೇರಿದ ಬಳಿಕ ಮಾಜಿ ಸಂಸದ ಹೆಚ್.ವಿಶ್ವನಾಥ್ ಇದೇ ಪ್ರಥಮ ಬಾರಿಗೆ ಮೈಸೂರಿನ ಜೆಡಿಎಸ್ ಕಚೇರಿಗೆ ಆಗಮಿಸಿದರು. ಅವರನ್ನು ಜೆಡಿಎಸ್ ನಗರಾಧ್ಯಕ್ಷ ಹರೀಶ್ ಗೌಡ ಆತ್ಮೀಯವಾಗಿ ಹಾರ ಹಾಕಿ, ಹೂಗುಚ್ಛ ನೀಡುವ ಮೂಲಕ ಕಚೇರಿಗೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ 32ನೇ ವಾರ್ಡ್ ಉಪಚುನಾವಣೆಯಲ್ಲಿ ವಿಜೇತರಾದ ಎಸ್.ಬಿ.ಎಂ.ಮಂಜು ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಹೆಚ್.ವಿಶ್ವನಾಥ್ ಮಾತನಾಡಿ ಮೊದಲ ಬಾರಿಗೆ ಜೆಡಿಎಸ್ ಕಚೇರಿಗೆ ಬಂದಿದ್ದೇನೆ. ಎಲ್ಲರೂ ಇಲ್ಲಿ ಪ್ರೀತಿಯಿಂದ ಬರಮಾಡಿಕೊಂಡಿದ್ದಾರೆ. ಜೆಡಿಎಸ್ ಪಕ್ಷದ ಬಲವರ್ಧನೆಗೆ ಶ್ರಮಿಸಲಾಗುವುದು ಎಂದರು. ಜೆಡಿಎಸ್ ಮುಖಂಡ ಎಚ್.ಡಿ ರೇವಣ್ಣ ಪುತ್ರ ಪ್ರಜ್ವಲ್ ನೀಡಿರುವ ಹೇಳಿಕೆಗೆ ಉತ್ತರಿಸಲು ಮಾಜಿ ಸಂಸದ ಎಚ್. ವಿಶ್ವನಾಥ್ ನಿರಾಕರಿಸಿದರು. ನಾನು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ಇಚ್ಛಿಸುವುದಿಲ್ಲ ಎಂದು ತಿಳಿಸಿದರು. ನನ್ನ ಸೇರ್ಪಡೆಯಿಂದ ಜೆಡಿಎಸ್ನಲ್ಲಿ ಗೊಂದಲ ಸೃಷ್ಠಿಯಾಗಿದೆ ಅನ್ನೋದು ಕಥೆ ಎಂದು ಸ್ಪಷ್ಟನೆ ನೀಡಿದ ಅವರು ಜೆಡಿಎಸ್ನ ಹಿಂದಿನ ಘಟನೆಗಳು, ಗುರುವಾರ ಹುಣಸೂರಿನಲ್ಲಿ ನಡೆದ ಘಟನೆಗಳ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಅವುಗಳ ಬಗ್ಗೆ ಪಕ್ಷದಲ್ಲಿನ ದೊಡ್ಡವರು ಮಾತನಾಡುತ್ತಾರೆ. ನಾನು ಯಾವುದರ ಬಗ್ಗೆಯೂ ಮಾತನಾಡುವುದಿಲ್ಲ ಎಂದರು. ಮೈಸೂರು ಮಹಾನಗರ ಪಾಲಿಕೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹೀನಾಯ ಸೋಲಿಗೆ ಆ ಪಕ್ಷದ ನಾಯಕರ ನಡವಳಿಕೆ ಕಾರಣವಾಗಿದೆ. ಕಾಂಗ್ರೆಸ್ ಪಕ್ಷದ ನಾಯಕರ ವರ್ತನೆಗೆ ಉಪ ಚುನಾವಣೆ ಸೋಲು ತಕ್ಕ ಪಾಠ ಕಲಿಸಿದೆ ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು. ನಗರಪಾಲಿಕೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಠೇವಣಿ ಕಳೆದುಕೊಂಡಿರುವುದನ್ನು ಲೇವಡಿ ಮಾಡಿದರು.
ಈ ಸಂದರ್ಭ ಮೇಯರ್ ಎಂ.ಜೆ.ರವಿಕುಮಾರ್ ಸೇರಿದಂತೆ ಜೆಡಿಎಸ್ ಪ್ರಮುಖರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)