ಪ್ರಮುಖ ಸುದ್ದಿ

ಭಾರತೀಯ ಸಂಸ್ಕೃತಿಗೆ ಜೈನಧರ್ಮದ ಕೊಡುಗೆ ಅಪಾರ: ವಿ.ಆರ್.ವಾಲಾ

ಪ್ರಮುಖ ಸುದ್ದಿ, ಶ್ರವಣಬೆಳಗೊಳ, ಜು.7: ಭಾರತೀಯ ಸಂಸ್ಕೃತಿ ಶ್ರೀಮಂತವಾಗಲು ಜೈನಧರ್ಮದ ಕೊಡುಗೆ ಅಪಾರವಾಗಿದ್ದು, ತ್ಯಾಗ, ಅಹಿಂಸೆ ಸತ್ಯ-ಧರ್ಮವನ್ನು ಜಗತ್ತಿಗೆ ಸಾರಿ ಹೇಳುವ ಜೈನ ಧರ್ಮವನ್ನು ಉಳಿಸಿ ಬೆಳೆಸುವ ಅಗತ್ಯವಿದೆ ಎಂದು ರಾಜ್ಯಪಾಲ ವಾಜುಭಾಯ್ ರೂಢಾಬಾಯ್ ವಾಲಾ ಅಭಿಪ್ರಾಯಪಟ್ಟರು.

ಶ್ರವಣಬೆಳಗೊಳದ ಚಾವುಂಡರಾಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಚಾತುರ್ಮಾಸ ಮಂಗಳ ಕಳಶ ಸ್ಥಾಪನಾ ಮಹೋತ್ಸವವನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಅವರು,     ಜೈನಧರ್ಮ ಮೌರ್ಯ ಸಾಮ್ರಾಜ್ಯದ ದೊರೆ ಅಶೋಕ ಚಕ್ರವರ್ತಿಯ ಕಾಲದಲ್ಲಿ ಭಾರತದಲ್ಲಿ ಸಾಕಷ್ಟು ಪ್ರವರ್ಧಮಾನದಲ್ಲಿತ್ತು. ಭಗವಾನ್ ಮಹಾವೀರರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಸಮಾಜವನ್ನು ನಿರ್ಮಿಸಬಹುದಾಗಿದ್ದು, ಅಹಿಂಸೆ, ಸತ್ಯ, ತ್ಯಾಗ ಏನಾದರು ಉಳಿದಿದೆ ಎಂದರೆ ಅದು ಜೈನ ಧರ್ಮದಲ್ಲಿ ಮಾತ್ರ ಎಂದು ಹೇಳಿದರು.

ಮಹಾತ್ಮಾ ಗಾಂಧೀಜಿಯವರು ಜೈನ ಧರ್ಮದ ಪ್ರೇರಣೆಯಿಂದ ಅಹಿಂಸಾ ಮಾರ್ಗದಿಂದ ಹೋರಾಟ ಮಾಡಿದರು. ಹಿಂಸೆ ಎಂದಿಗೂ ಒಳ್ಳೆಯದಲ್ಲ. ನಾವು ಎಂದಿಗೂ ಶಾಂತಿ, ಧರ್ಮ, ಸತ್ಯವನ್ನು ಅಳವಡಿಸಿಕೊಳ್ಳುವ ಮೂಲಕ ಶಾಂತಿ ಮತ್ತು ಉತ್ತಮ ಸಮಾಜ ನಿರ್ಮಿಸಲು ಶ್ರಮಿಸಬೇಕು ಎಂದು ಹೇಳಿದರು.

ಜಗದ್ಗುರು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ವರ್ಧಮಾನ್ ಸಾಗರ್ ಮಹಾರಾಜ್ ಸಾಹಿತಿ ನಾಡೋಜ ಡಾ.ಹಂ.ನಾಗರಾಜಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು, ಶಾಸಕ ಸಿ.ಎನ್.ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ, ಜಿ.ಪಂ.ಸದಸ್ಯೆ ಮಮತಾರಮೇಶ್, ತಾ.ಪಂ.ಸದಸ್ಯೆ ಮಹಾಲಕ್ಷ್ಮೀಶಿವರಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮಪ್ರಭಾಕರ್, ಜಿಲ್ಲಾಧಿಕಾರಿ ವಿ.ಚೈತ್ರಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: