ಮೈಸೂರು

ಜಿಲ್ಲಾಧಿಕಾರಿ ಡಿ.ರಂದೀಪ್ ಸೂಚನೆ ಮೇರೆಗೆ ಹಾಲಿ ಗ್ರಾಮ ಪಂಚಾಯತ್ ಸದಸ್ಯನ ಬಂಧನ

ಮೈಸೂರು, ಜು.7:- ಕಳೆದ 32 ವರ್ಷಗಳಿಂದ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿದ್ದ ಹಾಲಿ ಗ್ರಾಮ ಪಂಚಾಯತಿ ಸದಸ್ಯನೋರ್ವನನ್ನು ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್‌ ಆದೇಶದ ಮೇರೆಗೆ ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ.

ಬಂಧಿತನನ್ನು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ ಪೊಲೀಸ್ ಠಾಣೆಯಲ್ಲಿ ಎ ಪಟ್ಟಿಯಲ್ಲಿ ರೌಡಿ ಶೀಟರ್ ಆಗಿದ್ದ ಕೆ.ಕೆ.ರಾಮು (53)  ಎಂದು ಗುರುತಿಸಲಾಗಿದೆ. ಈತನ ವಿರುದ್ಧ 1987ರಿಂದ ಇಲ್ಲಿಯವರೆಗೂ ಕಳ್ಳಭಟ್ಟಿ, ಮಾದಕ ವಸ್ತುಗಳ ಮಾರಾಟ, ಜೂಜು ಅಡ್ಡೆ ನಡೆಸುವುದು, ಬಡ್ಡಿ ವ್ಯವಹಾರ ಸೇರಿದಂತೆ ಕಳ್ಳತನ, ಮಹಿಳೆಯರ ಮೇಲೆ ಮಾನಭಂಗ ಪ್ರಯತ್ನ, ದೊಂಬಿ, ಕೊಲೆ ಪ್ರಯತ್ನ, ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸಿದ ಪ್ರಕರಣ ಸೇರಿದಂತೆ 34 ಪ್ರಕರಣಗಳು ದಾಖಲಾಗಿವೆ. ಈತ ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಪಂ ಹಾಲಿ ಸದಸ್ಯನಾಗಿದ್ದು, ಈತನಿಗೆ ಇಬ್ಬರು ಪತ್ನಿಯರಿದ್ದಾರೆ. ಈತನ 2ನೇ ಪತ್ನಿ ಸಾವಿತ್ರಮ್ಮ ಎಂಬುವವರು ಇದೇ ಗ್ರಾಪಂನ ಹಾಲಿ ಅಧ್ಯಕ್ಷರಾಗಿದ್ದಾರೆ. ಕೆ.ಕೆ.ರಾಮು ಹಾಲಿ ಗ್ರಾಪಂ ಸದಸ್ಯನಾಗಿದ್ದರೂ ಕ್ರಿಮಿನಲ್ ಚಟುವಟಿಕೆಗಳಲ್ಲಿ ಸಕ್ರಿಯನಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸರು ಈತನ ವಿರುದ್ಧ ಗೂಂಡಾ ಕಾಯ್ದೆ ಹಾಕಿ ಬಂಧಿಸಿದ್ದಾರೆ. ಜಿಲ್ಲಾಧಿಕಾರಿ ಬಳಿ ಹಾಜರುಪಡಿಸಲಾಗಿದ್ದು,  ಈತನ ಹಿನ್ನೆಲೆ ಪರಿಶೀಲಿಸಿ ಅಧಿಸೂಚನೆ 1985(8) ಗೂಂಡಾ ಕಾಯ್ದೆ ಅಡಿ ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: