ಕರ್ನಾಟಕ

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಸಹಕರಿಸಿ: ಜಿಲ್ಲಾಧಿಕಾರಿ

ಮಡಿಕೇರಿ ಜು.07:-ಹದಿನೆಂಟು ವರ್ಷ ಪೂರ್ಣಗೊಂಡವರನ್ನು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲು ಸಹಕರಿಸುವಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ವಿವಿಧ ಕಾಲೇಜಿನ ಪ್ರಾಂಶುಪಾಲರಲ್ಲಿ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಕೋರಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ವಿವಿಧ ಕಾಲೇಜಿನ ಪ್ರಾಂಶುಪಾಲರ ಉಪಸ್ಥಿತಿಯಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ವಿಶೇಷ ಅಭಿಯಾನದ ಬಗ್ಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ಜುಲೈ, 31 ರವರೆಗೆ ಮತದಾರರ ಪಟ್ಟಿಗೆ  ಹೆಸರು ಸೇರ್ಪಡೆ, ತಿದ್ದುಪಡಿ, ಹೆಸರು ತೆಗೆಸುವುದು ಮತ್ತಿತರ ಬಗ್ಗೆ ಅಭಿಯಾನ ನಡೆಯಲಿದೆ. ಹಾಗೆಯೇ ಜುಲೈ, 8 ಮತ್ತು 22 ರಂದು ವಿಶೇಷ ಅಭಿಯಾನವು ಬೂತ್ ಮಟ್ಟದಲ್ಲಿ ಜರುಗಲಿದ್ದು, ಈ ಸಂಬಂಧ ಸಾರ್ವಜನಿಕರಿಗೆ, ಅರ್ಹ ಯುಜನರಿಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಅವರು ಮನವಿ ಮಾಡಿದರು.

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಹೆಸರು ತೆಗೆಯುವುದು ಅಥವಾ ವರ್ಗಾವಣೆ ಮಾಡುವುದು ನಿರಂತರ ಪ್ರಕ್ರಿಯೆಯಾಗಿದ್ದರೂ ಸಹ, ವಿಶೇಷ ಅಭಿಯಾನದ ಸಂದರ್ಭದಲ್ಲಿ ಮನೆ ಮನೆಗೆ ಭೇಟಿ ನೀಡಿ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದವರ ಹೆಸರು ಸೇರ್ಪಡೆ ಮಾಡುವುದು, ಮೃತಪಟ್ಟವರ ಹೆಸರು ತೆಗೆಯುವುದು ಮತ್ತಿತರ ಬಗ್ಗೆ ಮಾಹಿತಿ ನೀಡುವ ವಿಶೇಷ ಅಭಿಯಾನಯನ್ನು ಚುನಾವಣಾ ಆಯೋಗ ಹಮ್ಮಿಕೊಂಡಿದೆ ತಿಳಿಸಿದರು. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಯಾಗದೆ ಬಿಟ್ಟುಹೋಗಿರುವ ಮತ್ತು ಮೊದಲ ಬಾರಿಗೆ ಮತದಾರರ ಪಟ್ಟಿಯಲ್ಲಿ ಯುವ ಮತದಾರರನ್ನು(18-21) ನೋಂದಣಿ ಮಾಡುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಈ ಸಂಬಂಧ ಬೂತ್ ಮಟ್ಟದ ಅಧಿಕಾರಿಗಳು ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಮತದಾರರ ಪಟ್ಟಿಯಿಂದ ಹೆಸರು ತೆಗೆಯಲು, ತಿದ್ದುಪಡಿ ಮಾಡಲು ಮತ್ತು ಹೆಸರು ವರ್ಗಾಯಿಸಲು ನಮೂನೆ 6, 7, 8 ಮತ್ತು 8ಎ ಯನ್ನು ಸ್ವೀಕರಿಸಲಾಗುತ್ತದೆ. ಆದ್ದರಿಂದ ಹೊಸದಾಗಿ ಹೆಸರು ಸೇರ್ಪಡೆ ಮಾಡಲು ಮೃತ ಪಟ್ಟವರ ಹೆಸರು ತೆಗೆಯಲು, ವರ್ಗಾವಣೆ ಮಾಡಿಸಿಕೊಳ್ಳಲು ಬೂತ್ ಮಟ್ಟದಲ್ಲಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು. 2017ರ ಜನವರಿ, 01 ಕ್ಕೆ 18 ವರ್ಷ ಪೂರ್ಣಗೊಂಡಿರುವ, ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲು ಪ್ರಾಂಶುಪಾಲರು ವಿಶೇಷ ಆಸಕ್ತಿ ವಹಿಸಬೇಕಿದೆ. ಈ ಸಂಬಂಧ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವಂತೆ ಪ್ರಾಂಶುಪಾಲರಲ್ಲಿ ಕೋರಿದರು.

ಜಿಲ್ಲೆಯ ಹಾಡಿಯ ಜನರು ಸೇರಿದಂತೆ  ಪ್ರತಿಯೊಬ್ಬರಲ್ಲಿ ಅಭಿಯಾನದ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದವರ ಹೆಸರು ಸೇರ್ಪಡೆ ಮಾಡುವುದು, ಹೊಸ ಮತದಾರರ ನೋಂದಣಿ ಬಗ್ಗೆ ವಿಶೇಷ ಜಾಗೃತಿ ಮೂಡಿಸಬೇಕಿದೆ. ಹಾಡಿಗಳಲ್ಲಿ ವಿಶೇಷ ಒತ್ತು ನೀಡುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು. ಯಾರಿಂದಲೂ ಸಹ ಚುನಾವಣಾ ಗುರುತಿನ ಚೀಟಿ ಇಲ್ಲವೆಂದು ಕೇಳಿ ಬರಬಾರದು. ಚುನಾವಣಾ  ಸಂದರ್ಭದಲ್ಲಿ ಗುರುತಿನ ಚೀಟಿ ಇಲ್ಲವೆಂದು ಮತದಾನ  ಬಹಿಷ್ಕರಿಸುವುದಾಗಲಿ ಮತ್ತಿತರ ದೂರುಗಳು ಕೇಳಿ ಬರದಂತೆ ಈಗಿನಿಂದಲೇ ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

ತಹಶೀಲ್ದಾರರಾದ ಕುಸುಮ, ಮಹೇಶ್, ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ಶಾಖೆಯ ತಹಶೀಲ್ದಾರ್ ಕುಂಜಮ್ಮ, ಸರಸ್ವತಿ ಡಿ.ಇಡಿ ಕಾಲೇಜಿನ ಪ್ರಾಂಶುಪಾಲರಾದ  ಶ್ರೀಕುಮಾರ್, ಮೂರ್ನಾಡು ವಿದ್ಯಾಸಂಸ್ಥೆಯ  ಪ್ರೊ.ಭಾಗೀರಥಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಚೈತ್ರ, ಕೌಶಿಕ್ ಕುಮಾರ್, ಐಟಿಐ ಕಾಲೇಜಿನ ಪ್ರಾಂಶುಪಾಲರಾದ ಯೋಗೇಶ್ ಕುಮಾರ್, ಚೆರಿಯನ್, ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಕಾರ್ಯಪ್ಪ ಇತರರು ಇದ್ದರು.
ಹೆಚ್ಚಿನ ಮಾಹಿತಿಗೆ ಸಂಬಂಧಪಟ್ಟ ಹೋಬಳಿ ನಾಡ ಕಚೇರಿಯ ಉಪ ತಹಶೀಲ್ದಾರ್/ಕಂದಾಯ ನಿರೀಕ್ಷಕರು/ಗ್ರಾಮ ಲೆಕ್ಕಿಗರ ಕಚೇರಿ, ಸಂಬಂಧಪಟ್ಟ ತಾಲ್ಲೂಕಿನ ತಹಶೀಲ್ದಾರರ ಕಚೇರಿ(ಮಡಿಕೇರಿ ತಾಲ್ಲೂಕು-08272-228396/ಸೋಮವಾರಪೇಟೆ ತಾಲ್ಲೂಕು-08276-284044/ವಿರಾಜಪೇಟೆ ತಾಲ್ಲೂಕು-08274-257328), ಉಪ ವಿಭಾಗಾಧಿಕಾರಿಗಳ ಕಚೇರಿ, ಮಡಿಕೇರಿ ಉಪ ವಿಭಾಗ, ಮಡಿಕೇರಿ, ದೂ.ಸಂ:08272-225469, ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ, ಕೊಡಗು ಜಿಲ್ಲೆ, ಮಡಿಕೇರಿ. ದೂ.ಸಂ: 08272-225932 ನ್ನು ಸಂಪರ್ಕಿಸಬಹುದು. (ವರದಿ:ಕೆಸಿಐ, ಎಲ್.ಜಿ)

Leave a Reply

comments

Related Articles

error: