ಕರ್ನಾಟಕಪ್ರಮುಖ ಸುದ್ದಿ

ಡಾ.ಅಂಬೇಡ್ಕರ್ 126ನೇ ವರ್ಷಾಚರಣೆ ಹಿನ್ನೆಲೆ ಜು.21-23 ಅಂತರರಾಷ್ಟ್ರೀಯ ಸಮ್ಮೇಳನ ಆಯೋಜನೆ : ಸಿಎಂ ಸಿದ್ದರಾಮಯ್ಯ

ರಾಜ್ಯ(ಬೆಂಗಳೂರು)ಜು.8:- ಡಾ.ಅಂಬೇಡ್ಕರ್ 126ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಜುಲೈ 21 ರಿಂದ 23ರವರೆಗೆ ಅಂತರರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗಿದ್ದು, 300 ಭಾಷಣಕಾರರು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಬೆಂಗಳೂರಿನ ವಿಧಾನಸೌಧದಲ್ಲಿ ಶನಿವಾರ ಬೆಳಿಗ್ಗೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜು.21-23ರವರೆಗೆ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಮ್ಮೇಳನ ನಡೆಸಲಾಗುತ್ತಿದ್ದು, ದೇಶದ ವಿವಿಧೆಡೆಯಿಂದ 2 ಸಾವಿರ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದರು. ದೇಶ ವಿದೇಶಗಳಿಂದ 300 ಪ್ರಬಂಧಕಾರರು, ರಾಜ್ಯ ಮತ್ತು ರಾಷ್ಟ್ರದ 2ಸಾವಿರ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.  ಅಂತರಾಷ್ಟ್ರೀಯ ಸಭಾಧ್ಯಕ್ಷರು,  80 ಸ್ಪೀಕರ್ ಮೂರು ದಿನವೂ ಭಾಗವಹಿಸಲಿದ್ದಾರೆ. ಉದ್ಘಾಟನೆ‌ಯ ದಿನ‌ ಮಾನವ ಹಕ್ಕುಗಳ ವಕೀಲ ಮತ್ತು ಕಾರ್ಯಕರ್ತ ಮಾರ್ಟಿನ್ ಲೂಥರ್ ಕಿಂಗ್ ಮತ್ತು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಸಂಸದರು ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಸಮ್ಮೇಳನದಲ್ಲಿ  ಸಾಮಾಜಿಕ ನ್ಯಾಯ,ರಾಜಕೀಯ ನ್ಯಾಯದ ಪರಿಕಲ್ಪನೆ,ಸಾಮಾಜಿಕ ಸನ್ನಿವೇಶ,ಆರ್ಥಿಕ‌ ನ್ಯಾಯ ಕುರಿತು ಚರ್ಚೆಯಾಗಲಿದೆ. ಸಮಾವೇಶದಲ್ಲಿ ಪ್ರೊ,ಸುಕದೇವ್ ತೋರಟ್, ಅರುಣ್ ರಾಯ್,ನಿಖಿಲ್ ಡೇ, ಡಾ.ಶಶಿತರೂರ್,ಸಲ್ಮಾನ್ ಖುರ್ಷಿದ್, ಪ್ರಕಾಶ್ ಅಂಬೇಡ್ಕರ್, ಆನಂದ್ ತೇಲ್ ತುಮ್ಡೆ, ವಿಲ್ಸನ್ ಬೇಜವಾಡ, ವಲೇರಿಯನ್ ರೋಡ್ರಿಗಸ್, ನೀರಾ ಚಾಂಡೋಕೆ, ರಾಜ್ಯದ ಸಾಹಿತಿಗಳಾದ ದೇವನೂರು ಮಹಾದೇವ, ಜಿ.ಕೆ.ಗೋವಿಂದರಾವ್, ಡಾ.ಸಿದ್ದಲಿಂಗಯ್ಯ,ಪ್ರೊ.ಕೆ.ಮರುಳ ಸಿದ್ದಪ್ಪ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ರವಿವರ್ಮ ಕುಮಾರ್,ಚಂದ್ರಶೇಖರ್ ಕಂಬಾರ,ಪ್ರೊ.ಮಲ್ಲಿಕಾ ಘಂಟಿ,ದಿನೇಶ್ ಅಮೀನ್ ಮಟ್ಟು,ಗೌರಿ ಲಂಕೇಶ್,ರಹಮತ್ ತರಿಕೇರಿ, ಜಸ್ಟೀಸ್ ನಾಗಮೋಹನ ದಾಸ್ ಕೂಡ ಅಂಬೇಡ್ಕರ್ ಕುರಿತ ವಿಚಾರ ಹಂಚಿಕೊಳ್ಳಲಿದ್ದಾರೆ. ಸಮ್ಮೇಳನದ ಕೊನೆಯಲ್ಲಿ ಕರ್ನಾಟಕ ಸರ್ಕಾರ  ಬೆಂಗಳೂರು ಘೋಷಣೆ ಪ್ರಾರಂಭಿಸಲಿದ್ದು,ಸಾಮಾಜಿಕ ನ್ಯಾಯ, ಮಾನವ ಹಕ್ಕುಗಳು, ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಕಾಳಜಿಗೆ ನಿರ್ದಿಷ್ಟ ಸಾಂವಿಧಾನಿಕ, ಸಾಂಸ್ಥಿಕ ಮತ್ತು ನೀತಿ ಪ್ರತಿಕ್ರಿಯೆ ರೂಪಿಸಲು ಆರಂಭಿಸಲಾಗುವುದು ಎಂದರು.‌ ಕರ್ನಾಟಕ ಸರ್ಕಾರ ಸೆಕ್ಯೂಲರಿಸಂಗೆ ಬದ್ಧವಾಗಿದೆ. ದೇಶದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆದಿದೆ. ಸಾಮಾಜಿಕ ನ್ಯಾಯ ಸಂವಿಧಾನದ ಮೂಲ ಆಶಯವಾಗಿದೆ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಗಲಭೆಯ ಕುರಿತು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು ನಾನೇ ನಿನ್ನೆ ಅಲ್ಲಿಗೆ ಭೇಟಿ ನೀಡಿದ್ದೆ. ಯಾರೇ ಕಾನೂನು ಕೈಗೆತ್ತಿಕೊಂಡರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಕಾನೂನು ಉಲ್ಲಂಘನೆಯನ್ನು ಯಾರೇ ಮಾಡಿದರೂ ಕ್ರಮ ಕೈಗೊಳ್ಳಲಾಗುವುದು. ಹಿಂದೂಗಳೇ ಇರಲಿ,ಯಾರೇ ಇರಲಿ ತಪ್ಪು ಮಾಡಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಚಿವರುಗಳಾದ ಪ್ರಿಯಾಂಕ್ ಖರ್ಗೆ, ಟಿ ಬಿ ಜಯಚಂದ್ರ, ಡಾ ಹೆಚ್ ಸಿ ಮಹದೇವಪ್ಪ, ಹೆಚ್ ಆಂಜನೇಯ, ಕೃಷ್ಣ ಬೈರೇಗೌಡ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: