ಮೈಸೂರು

ನದಿ ಜೋಡಣೆ : ಸಹಿ ಸಂಗ್ರಹ ಚಳುವಳಿ ಜು.14ಕ್ಕೆ ಚಾಲನೆ

ಮೈಸೂರು.ಜು.8  : ನದಿ ಜೋಡಣೆಗೆ ಆಗ್ರಹಿಸಿ ಮೈಸೂರಿನ ಜಲಸಂಗಮ ಹಕ್ಕೊತ್ತಾಯ ಸಮಿತಿಯಿಂದ ಸಹಿ ಸಂಗ್ರಹ ಚಳುವಳಿಯನ್ನು ಜು.14ರಂದು ಆಯೋಜಿಸಲಾಗಿದೆ ಎಂದು ಸಮಿತಿ ಸಂಚಾಲಕಿ ಯಮುನಾ ತಿಳಿಸಿದರು.

ಅಂದು ಬೆಳಿಗ್ಗೆ 11ಕ್ಕೆ ನಗರದ ಇನ್ಸಿಟ್ಯೂಟ್ ಆಫ್ ಇಂಜಿನಿಯರ್ಸ್ ನಲ್ಲಿ, ವಿಧಾನ ಪರಿಷತ್ ಸಭಾಪತಿ ಡಿ.ಹೆಚ್.ಶಂಕರ್ ಮೂರ್ತಿ ಸಹಿ ಸಂಗ್ರಹ ಚಳುವಳಿಗೆ ಚಾಲನೆ ನೀಡುವರು, ಶಾಸಕ ಜಿ.ಟಿ.ದೇವೇಗೌಡ ಅಧ್ಯಕ್ಷತೆ ವಹಿಸುವರು ಎಂದು ಶನಿವಾರ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂಪಾದಕ ರಾಜಶೇಖರ ಕೋಟಿ, ಕೆ.ರಘುರಾಮಯ್ಯ ವಾಜಪೇಯಿ, ಕ.ಸಾ.ಪ ಮಾಜಿ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ಕಸಾಪ ಉಪನಿರ್ದೇಶಕ ಟಿ.ಎನ್.ದಾಸೇಗೌಡ ಹಾಜರಿರುವರು ಹಾಗೂ ‘ಜಲಸಂಗಮ-ಮುಂದಿನ ಪೀಳಿಗೆಯ ಆಶಾಕಿರಣ’ ವಿಷಯವಾಗಿ ಶಂಕರವಿಲಾಸ ಸಂಸ್ಕೃತ ಪಾಠಶಾಲೆ ಪ್ರಾಂಶುಪಾಲ ಶ್ರೀನಿವಾಸಮೂರ್ತಿ ಮಾತನಾಡುವರು ಎಂದು ತಿಳಿಸಿದರು.

ಗಂಗಾ-ಕಾವೇರಿ ನದಿ ಜೋಡಣೆ ಯೋಜನೆಗೆ 1972ರಲ್ಲಿ ಅಂದಿನ ಕೇಂದ್ರ ಜಲಸಂಪನ್ಮೂಲ ಇಲಾಖೆ ಸಚಿವ ಡಾ.ಕೆ.ಎಲ್.ರಾವ್ ಆಸಕ್ತಿ ತೋರಿ ಯೋಜನೆ ರೂಪಿಸಿದ್ದರು. ತದ ನಂತರ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಯೋಜನೆಯ ಅನುಷ್ಠಾನಕ್ಕೆ ಹೆಚ್ಚಿನ ಆಸಕ್ತಿ ತೋರಿದ್ದರು, ಆನಂತರದ ಸರ್ಕಾರಗಳು ಈ ಬಗ್ಗೆ ನಿರ್ಲಕ್ಷ್ಯ ಧೋರಣೆಯನ್ನು ತೋರಿರುವುದರಿಂದ ಇಂತಹ ಮಹತ್ವಪೂರ್ಣ ಯೋಜನೆಯೂ ಇಚ್ಚಾಶಕ್ತಿಯಿಲ್ಲದೆ ಅನುಷ್ಠಾನಗೊಳ್ಳುತ್ತಿಲ್ಲ ಆದ್ದರಿಂದ ಪ್ರಧಾನಿ ನರೇಂದ್ರ ಮೋದಿಯವರು ನದಿ ಜೋಡಣೆಗೆ ಮುಂದಾಗಬೇಕೆಂದು ಆಶಿಸಿದರು.

ಯೋಜನೆ ಜಾರಿಗೆ ಆಗ್ರಹಿಸಿ  ಒಂದು ಲಕ್ಷ ಸಹಿ ಸಂಗ್ರಹ ಗುರಿಯನ್ನು ಹೊಂದಲಾಗಿದೆ. ಜು.15ರಂದು ಕೆ.ಆರ್.ವೃತ್ತದಲ್ಲಿ ಸಹಿಸಂಗ್ರಹ ಮುಂದುವರೆಯಲಿದ್ದು ಸಾರ್ವಜನಿಕರು ಜಾಗೃತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಿದರು. ಹೆಚ್ಚಿನ ಮಾಹಿತಿಗಾಗಿ ದೂ.ಸಂ 9902698623 ಅನ್ನು ಸಂಪರ್ಕಿಸಬಹುದು.

ಕಸಾಪ ನಿರ್ದೇಶಕ ದಾಸೇಗೌಡ, ಪದ್ಮಾವತಿ ನಾಗರಾಜ್, ವಿಜಯಕುಮಾರ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. (ಕೆ.ಎಂ.ಆರ್)

 

Leave a Reply

comments

Related Articles

error: