ಪ್ರಮುಖ ಸುದ್ದಿ

ಕೆಲ ದಿನಗಳ ಮಟ್ಟಿಗೆ ಭಾರತ ಪ್ರವಾಸ ಮುಂದೂಡಿ: ತನ್ನ ಪ್ರಜೆಗಳಿಗೆ ಚೀನಾ ಸರ್ಕಾರ ಸೂಚನೆ

ಪ್ರಮುಖ ಸುದ್ದಿ, ನವದೆಹಲಿ, ಜು.೮: ಸಿಕ್ಕಿಂ ಗಡಿಯಲ್ಲಿ ಹಿಡಿತ ಸಾಧಿಸುವ ಜಿದ್ದಿಗೆ ಬಿದ್ದಿರುವ ಭಾರತ ಹಾಗೂ ಚೀನಾ ಗುದ್ದಾಟ ನಡೆಸುತ್ತಿದ್ದು ಭಾರತ ಪ್ರವಾಸ ಕೈಗೊಳ್ಳದಂತೆ ಚೀನಾ ಸರ್ಕಾರ ತನ್ನ ಪ್ರಜೆಗಳಿಗೆ ಸೂಚಿಸಿದೆ.
ಸಿಕ್ಕಿಂನ ಡೋಕ್ಲಾಮ್ ಪ್ರದೇಶದ ಮೇಲೆ ಹಿಡಿತ ಸಾಧಿಸಲು ಉಭಯ ದೇಶಗಳು ಗುದ್ದಾಟ ನಡೆಸುತ್ತಿದ್ದು, ಗಡಿಯಲ್ಲಿ ಯುದ್ಧದ ಭೀತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಶನಿವಾರ ತನ್ನ ಪ್ರಜೆಗಳಿಗೆ ಮುಂಜಾಗ್ರತಾ ಸಲಹೆಗಳನ್ನು ನೀಡಿರುವ ಚೀನಾ ಭಾರತ ಪ್ರವಾಸವನ್ನು ಕೆಲ ದಿನಗಳ ಮಟ್ಟಿಗೆ ಮುಂದೂಡಬೇಕು ಮತ್ತು ಭಾರತದಲ್ಲಿ ತಮ್ಮ ಸಂಬಂಧಿಕರ ಸುರಕ್ಷತೆ ಕುರಿತಂತೆ ಜಾಗೃತಿ ವಹಿಸಬೇಕು ಎಂದು ತಿಳಿಸಿದೆ. ಇದೇ ವೇಳೆ ದೆಹಲಿಯಲ್ಲಿರುವ ಚೀನಾ ರಾಯಭಾರ ಕಚೇರಿ ಕೂಡ ದೇಶದಲ್ಲಿರುವ ತನ್ನ ನಾಗರಿಕರಿಗೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆ ಸೂಚಿಸಿದ್ದು, ತಮ್ಮ ಮತ್ತು ಕುಟುಂಬಸ್ಥರು, ಸ್ನೇಹಿತರ ಸುರಕ್ಷತೆ ಕುರಿತಂತೆ ಕ್ಷಣ ಕ್ಷಣದ ಮಾಹಿತಿ ಪಡೆಯುವಂತೆ ಸಲಹೆ ನೀಡಿದೆ. ಅಂತೆಯೇ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ತಮ್ಮ ತಮ್ಮ ಕೆಲಸ ಕಾರ್ಯಗಳನ್ನು ಯೋಜಿಸಿಕೊಳ್ಳುವಂತೆ ಸಲಹೆ ನೀಡಿದೆ. ಇತ್ತೀಚಿನ ದಿನಗಳಲ್ಲಿ ಭಾರತ ಪ್ರವಾಸ ಕೈಗೊಳ್ಳುವ ಚೀನಾ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದ್ದು, ಪ್ರತಿ ವರ್ಷ ಸರಿ ಸುಮಾರು ೨ ಲಕ್ಷ ಪ್ರವಾಸಿಗರು ಭಾರತ ಪ್ರವಾಸ ಕೈಗೊಳ್ಳುತ್ತಾರೆ. (ವರದಿ ಬಿ.ಎಂ)

Leave a Reply

comments

Related Articles

error: