ಮೈಸೂರು

ಕಬ್ಬು ಬೆಳೆಗಾರರ ಸಂಘದಿಂದ ಕಡಕ್ ಎಚ್ಚರಿಕೆ

ಮೈಸೂರು, ಜು.10: ಕಬಿನಿ ಅಣೆಕಟ್ಟೆಯಿಂದ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸುವಂತೆ ಒತ್ತಾಯಿಸಿ ರಾಜ್ಯ ರೈತಸಂಘ ಇಂದು ಟಿ.ನರಸೀಪುರದ ಕಬಿನಿನಾಲಾ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನೆಡೆಸಿದರು.

ಪ್ರತಿವರ್ಷ ಜುಲೈನಲ್ಲಿ ನಾಲೆಗಳಿಗೆ ನೀರು ಹರಿಸುತ್ತಾರೆ ಎಂದು ರೈತರು ಕೃಷಿ ಚಟುವಟಿಕೆಗಳಿಗೆ  ಅಣಿಯಾಗಲು ನಾಲೆಗಳ ನೀರಿಗೆ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಇಂತಹ ಸಮಯದಲ್ಲಿ ಪ್ರತಿನಿತ್ಯ 3-4 ಸಾವಿರ ಕ್ಯೂಸೆಸ್ ನೀರನ್ನು ನದಿಯ ಮುಲಕ ತಮಿಳುನಾಡಿಗೆ ಹರಿಸುತ್ತಿರುವುದು ರೈತರಿಗೆ ಮಾಡುತ್ತಿರುವ ದ್ರೋಹ. ಕೂಡಲೆ ನೀರು ನಿಲ್ಲಿಸಲು ಕ್ರಮ ಕೈಗೊಳ್ಳಬೇಕೆಂದು ತಾಲೂಕು ಎಕ್ಸಿಕ್ಯುಟಿವ್ ಇಂಜಿನಿಯರ್ ಗೆ ಮನವಿ ಸಲ್ಲಿಸಿದರು. ಕೂಡಲೆ ತಮಿಳುನಾಡಿಗೆ ಹರಿಯುತ್ತಿರುವ ನೀರು ನಿಲ್ಲಿಸದಿದ್ದರೆ   ಪ್ರತಿಭಟನೆಯನ್ನು ತೀವ್ರಗೊಳಿಸಿ ಜು.14 ರಂದು ಮೈಸೂರಿನ ಕಾಡ ಕಛೇರಿಗೆ ಮುತ್ತಿಗೆ ಹಾಕುವುದಾಗಿ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಎಚ್ಚರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ತಾಲೂಕು ಎಕ್ಸಿಕ್ಯುಟಿವ್ ಇಂಜಿನಿಯರ್ ಮಹೇಶ್ ಕುಮಾರ್ ಬೆಂಗಳೂರಿಗೆ ಕುಡಿಯುವ ನೀರಿನ ಪೂರೈಕೆಗೆಂದು700 ಕ್ಯೂಸೆಸ್ ನೀರು ಬಿಡಲಾಗುತ್ತಿದ್ದು,  ನೀಡಿರುವ ಮನವಿಯೊಂದಿಗೆ ರೈತರ ಪರಿಸ್ಥಿತಿಯನ್ನು ಮೇಲಾಧಿಕಾರಿಗಳಿಗೆ ತಿಳಿಯಪಡಿಸಿ ಪರಿಹಾರ ದೊರಕಿಸುವುದಾಗಿ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಸಂಘದ ಸಂಘಟನಾ ಕಾರ್ಯದರ್ಶಿ ಹತ್ತಹಳ್ಳಿ ದೇವರಾಜ, ತಾಲ್ಲೂಕು ಅದ್ಯಕ್ಷ ಕುರುಬೂರು ಸಿದ್ದೇಶ್ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು. (ವರದಿ: ಎಸ್.ಎನ್, ಎಲ್.ಜಿ)

Leave a Reply

comments

Related Articles

error: