
ಪ್ರಮುಖ ಸುದ್ದಿ
ಸಿದ್ದರಾಮಯ್ಯ ರಾಜೀನಾಮೆಗೆ ಈಶ್ವರಪ್ಪ ಒತ್ತಾಯ
ಪ್ರಮುಖ ಸುದ್ದಿ, ಬೆಂಗಳೂರು, ಜು.೧೦: ರಾಜ್ಯದಲ್ಲಿ ನಡೆಯುತ್ತಿರುವ ಕೋಮು ಗಲಭೆಗಳಿಗೆ ರಾಜ್ಯ ಸರ್ಕಾರವೇ ನೇರ ಹೊಣೆಯಾಗಿದ್ದು ಕೂಡಲೇ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಈಶ್ವರಪ್ಪ ಒತ್ತಾಯಿಸಿದರು.
ಈ ಸಂಬಂಧ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋಮು ಗಲಭೆಗಳು ನಡೆದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾವಿಸಿದ್ದಾರೆ. ಶಾಂತಿ ಭಂಗ ಉಂಟು ಮಾಡುವ ಎಲ್ಲ ಧರ್ಮದವರ ವಿರುದ್ದ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳುವ ಧೈರ್ಯ ಅವರಿಗಿಲ್ಲ. ಬೇರೆ ಧರ್ಮದ ಹೆಸರೇಳಲು ಅವರಿಗೆ ಭಯ ಎಂದು ಕಿಡಿಕಾರಿದ ಅವರು, ರಾಜ್ಯ ಸರ್ಕಾರವೇ ಕೊಲೆಗಡುಕರಿಗೆ ಧೈರ್ಯ ನೀಡುತ್ತಿದೆ. ಮೊದಲೇ ಕ್ರಮ ಕೈಗೊಂಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ನಿರ್ಮಾಣವಾಗುತ್ತಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ಇದು ಷಂಡರ ಸಮಾಜ ಅಲ್ಲ, ಕೊಲೆಯಾಗುತ್ತಿರುವಾಗ ಸುಮ್ಮನೆ ಕೂರಲು ಆಗುವುದಿಲ್ಲ. ಹಿಂದೆ ರಾಮನಗರದಲ್ಲಿ ಕೋಮು ಗಲಭೆಯಾಗಿ ವೀರೇಂದ್ರ ಪಾಟೀಲರು ಅಧಿಕಾರ ಕಳೆದುಕೊಂಡರು. ಇದನ್ನು ಸಿದ್ದರಾಮಯ್ಯ ಅರಿತುಕೊಳ್ಳಬೇಕು. ಗಲಭೆಗೆ ಸರ್ಕಾರದ ಕುಮ್ಮಕ್ಕೇ ಕಾರಣ. ಹಾಗಾಗಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. (ವರದಿ ಬಿ.ಎಂ)