
ಕರ್ನಾಟಕಪ್ರಮುಖ ಸುದ್ದಿ
ಪ್ರಗತಿಶೀಲ ಪ್ರಜಾಸತ್ತಾತ್ಮಕ ಭಾರತದ ರಕ್ಷಣೆಗೆ ಸಮ್ಮೇಳನ : ಸಿಎಂ
ಬೆಂಗಳೂರು, ಜು.10 : ಜುಲೈ 21 ರಿಂದ 23ರ ವರೆಗೆ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಜಿಕೆವಿಕೆ ಆವರಣದಲ್ಲಿರುವ ಸಮಾವೇಶ ಕೇಂದ್ರದಲ್ಲಿ ಸಮಾಜ ‘ನ್ಯಾಯ ಮರು ಪಡೆದುಕೊಳ್ಳುವುದು- ಅಂಬೇಡ್ಕರ್ ಮರುಪರಿಶೀಲನೆ’ ವಿಷಯ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನವನ್ನು ಏರ್ಪಡಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುದ್ದಿಗಾರರಿಗೆ ತಿಳಿಸಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಮ್ಮೇಳನ ಲಾಂಛನ ಬಿಡುಗಡೆ ಮಾಡಿದ ಮುಖ್ಯಮಂತ್ರಿಗಳು, ಪತ್ರಿಕಾಗೋಷ್ಠಿಯಲ್ಲಿ ಸಮ್ಮೇಳನದ ವಿವರಗಳನ್ನು ನೀಡಿದರು. ಈ ಸಮ್ಮೇಳನದಲ್ಲಿ ಸುಮಾರು 2000ಕ್ಕೂ ಹೆಚ್ಚು ಆಹ್ವಾನಿತರು ಭಾಗವಹಿಸಲಿದ್ದು, 83 ಅಂತಾರಾಷ್ಟ್ರೀಯ, 149 ರಾಷ್ಟ್ರೀಯ ಮತ್ತು 80 ರಾಜ್ಯದ ಭಾಷಣಕಾರರು ವಿಷಯ ಮಂಡಿಸಲಿದ್ದಾರೆ. ಉದ್ಘಾಟನೆಯ ದಿನ ಮಾನವ ಹಕ್ಕುಗಳ ವಕೀಲ ಮತ್ತು ಕಾರ್ಯಕರ್ತ ಮಾರ್ಟಿನ್ ಲೂಥರ್ ಕಿಂಗ್-3 ಮತ್ತು ಸಂಸತ್ ಸದಸ್ಯ ರಾಹುಲ್ ಗಾಂಧಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಕಾಳಜಿಯ ಸೇತುವೆ:
ವಿವಿಧ ಹಂತಗಳಲ್ಲಿ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ನ್ಯಾಯದ ಮೇಲೆ ದಬ್ಬಾಳಿಕೆ ನಡೆಯುತ್ತಿರುವ ಸಂದರ್ಭದಲ್ಲಿ ಈ ಸಮ್ಮೇಳನವು ನಡೆಯುತ್ತಿದೆ, ವಿವಿಧ ಪದರಗಳಲ್ಲಿ ಮಡುಗಟ್ಟಿರುವ ಅಸಮಾನತೆ, ವೈವಿಧ್ಯತೆ, ಬಹಿಷ್ಕಾರ ಮತ್ತು ಶೋಷಣೆಯನ್ನೊಳಗೊಂಡ ಸಮಾಜಕ್ಕಾಗಿ ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಅನ್ವೇಷಣೆ, ಸಾಮಾಜಿಕ ನ್ಯಾಯಕ್ಕಾಗಿ ಸಾಂವಿಧಾನಿಕ, ಸಾಂಸ್ಥಿಕ ಮತ್ತು ನೀತಿ ನಿರೂಪಣೆ ಮತ್ತು ಸಾಮಾಜಿಕ ನ್ಯಾಯ ಮತ್ತು ಪೂರಕ ಮಾನದಂಡಗಳು, ಕಾಳಜಿಗಳ ನಡುವಣ ಸೇತುವೆಯಾಗುವುದು ಈ ಸಮ್ಮೇಳನದ ಉದ್ದೇಶವಾಗಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.
ಬೆಂಗಳೂರು ಘೋಷಣೆ:
ಸಮ್ಮೇಳನವು ಸಾಮಾಜಿಕ ನ್ಯಾಯದ ಪರಿಕಲ್ಪನೆ, ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಸನ್ನಿವೇಶ, ಆರ್ಥಿಕ ನ್ಯಾಯ ಹಾಗೂ ಸಾಮಾಜಿಕ ನ್ಯಾಯ ಮತ್ತು ಸಾಂಸ್ಕೃತಿಕ ಪ್ರಭಾವ ವಲಯ ಎಂಬ ವಿಷಯಗಳ ಕುರಿತು ಬೆಳಕು ಚೆಲ್ಲಲಿದೆ. 1938ರಲ್ಲಿ ಯೋಜನಾ ಸಮಿತಿಯು ಮಾಡಿರುವ ಘೋಷಣೆಯ ಮಾದರಿಯಲ್ಲಿಯೇ ಸಮ್ಮೇಳನದ ಅಂತ್ಯದಲ್ಲಿ ಬೆಂಗಳೂರು ಘೋಷಣೆ ಮಾಡಲಾಗುವುದು. ಸಾಮಾಜಿಕ ನ್ಯಾಯ, ಮಾನವ ಹಕ್ಕುಗಳು, ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಕಾಳಜಿಗೆ ನಿರ್ದಿಷ್ಟ ಸಾಂವಿಧಾನಿಕ, ಸಾಂಸ್ಥಿಕ ಮತ್ತು ನೀತಿ ಪ್ರತಿಕ್ರಿಯೆಗಳನ್ನು ರೂಪಿಸುವ ಬೆಂಗಳೂರು ಘೋಷಣೆಯನ್ನು ಕರ್ನಾಟಕ ಸರ್ಕಾರವು ಮಾಡಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಆಂಜನೇಯ ಹಾಗೂ ಇತರರು ಹಾಜರಿದ್ದರು. (ಕೆ.ಎಂ.ಆರ್)