ಮೈಸೂರು

ದೊಡ್ಡಕೆರೆ ಮೈದಾನ ಸ್ವಾಧೀನಕ್ಕೆ ತೆಗೆದುಕೊಂಡ ಒಡೆಯರ್ ಮನೆತನ

ದಸರಾ ವಸ್ತುಪ್ರದರ್ಶನ ಮೈದಾನ ಮತ್ತು ಮೈಸೂರು ಅರಮನೆ ಎದುರು ಇರುವ ದೊಡ್ಡಕೆರೆ ಮೈದಾನವನ್ನು ಮೈಸೂರು ರಾಜವಂಶಸ್ಥರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಇಲ್ಲಿಯವರೆಗೆ ದಸರಾ ವಸ್ತುಪ್ರದರ್ಶನ ಪ್ರಾಧಿಕಾರದ ವಶದಲ್ಲಿದ್ದ 10.36 ಎಕರೆ ಜಾಗವನ್ನು ಸುಪ್ರೀಂ ಕೋರ್ಟ್‍ ಆದೇಶಾನುಸಾರ ಮೈಸೂರು ಒಡೆಯರ್ ಮನೆತನ ತನ್ನ ವಶಕ್ಕೆ ತೆಗೆದುಕೊಂಡಿದೆ.

ಮಹಾರಾಣಿ ಪ್ರಮೋದಾದೇವಿ ಅವರ ಸೂಚನೆ ಮೇರೆಗೆ ಜೆಸಿಬಿ ಮೂಲಕ ಜಾಗದ ಗಡಿ ಗುರುತಿಸಿ ಸಮತಟ್ಟು ಮಾಡುವ ಕಾರ್ಯ ಗುರುವಾರ (ಸೆ.1) ನಡೆಯಿತು. ದೊಡ್ಡಕೆರೆ ಮೈದಾನದ ಜಾಗ ಯಾರಿಗೆ ಸೇರಿದ್ದು ಎನ್ನುವ ವಿವಾದ ಕೊನೆಗೊಂಡಂತಾಗಿದ್ದು, 10.36ಎಕ್ರೆ ಪ್ರದೇಶವನ್ನು ರಾಜಮಾತೆ ಪ್ರಮೋದಾದೇವಿ ತಮ್ಮ ಸ್ವಾಧೀನಕ್ಕೆ ಪಡೆದಿದ್ದಾರೆ.

ಸ್ವಾಧೀಕಕ್ಕೆ ಅಡ್ಡಿ: ಸ್ವಾಧೀನ ಕಾರ್ಯಕ್ಕೆ ಜೆಸಿಬಿ ವಾಹನಗಳು ಆಗಮಿಸಿ ಗಡಿ ಗುರುತಿಸುವ ಕಾರ್ಯಕ್ಕೆ ಮುಂದಾದಾಗ ವಸ್ತುಪ್ರದರ್ಶನ ಪ್ರಾಧಿಕಾರದ ವ್ಯಕ್ತಿಗಳು ಆಗಮಿಸಿ ಕೆಲಸ ನಿಲ್ಲಿಸುವಂತೆ ಒತ್ತಾಯಿಸಿದರು. ಇದರಿಂದ ಗೊಂದಲ ಉಂಟಾಗಿ ಕೆಲಕಾಲ ಕೆಲಸ ಸ್ಥಗಿತಗೊಳಿಸಲಾಗಯಿತು. ನಂತರ ಪ್ರಮೋದಾದೇವಿಯವರ ಸೂಚನೆ ಮೇರೆಗೆ ಕೆಲಸ ಆರಂಭಿಸಿ ಜಾಗವನ್ನು ಒಡೆಯರ್ ಮನೆತನದ ವಶಕ್ಕೆ ತೆಗೆದುಕೊಳ್ಳಲಾಯಿತು.

ನ್ಯಾಯಾಲಯದ ಆದೇಶದಂತೆ ಪ್ರಮೋದಾದೇವಿ ಅವರ ಹೆಸರಿಗೆ ಖಾತೆ ಮಾಡಿಸಿಕೊಡುವಂತೆ ಕಳೆದ ಮೇ ತಿಂಗಳಿನಲ್ಲಿ ಸವೋಚ್ಚ ನ್ಯಾಯಾಲಯ ಕಂದಾಯ ಇಲಾಖೆಗೆ ಸೂಚಿಸಿತ್ತು. ಒಂದು ವೇಳೆ ಖಾತೆ ಮಾಡಿಕೊಡದಿದ್ದರೆ ನೀವೇ ಆ ಜಾಗವನ್ನು ನಿಮ್ಮ ಸುಪರ್ದಿಗೆ ಪಡೆಯಬಹುದು ಎಂದು ತಿಳಿಸಿತ್ತು. ಕಂದಾಯ ಇಲಾಖೆ ಇದುವರೆಗೂ ಖಾತೆ ಮಾಡಿಕೊಡದೆ ಕಡೆಗಣಿಸಿತ್ತು. ಈ ಹಿನ್ನೆಲೆಯಲ್ಲಿ ಒಡೆಯರ್ ಮನೆತನ ಜಾಗವನ್ನು ಸ್ವಾಧೀನಕ್ಕೆ ತೆಗೆದುಕೊಂಡಿದೆ.

ಸದ್ಯದಲ್ಲಿಯೇ ದಸರಾ ಉತ್ಸವ ಆರಂಭವಾಗಲಿದ್ದು, ದೊಡ್ಡಕೆರೆ ಜಾಗದಲ್ಲಿ ಪ್ರತಿವರ್ಷ ವಾಹನಗಳ ಪಾರ್ಕಿಂಗ್ ಮಾಡಲಾಗುತ್ತಿತ್ತು.  ಈಗ ಈ ಜಾಗವನ್ನು ಒಡೆಯರ್ ಮನೆತನ ಸ್ವಾಧೀನಕ್ಕೆ ಪಡೆದಿರುವುದರಿಂದ ವಸ್ತುಪ್ರದರ್ಶನ ಪ್ರಾಧಿಕಾರವು ದಸರಾ ಸಮಯದಲ್ಲಿ ಬರುವ ನೂರಾರು ವಾಹನಗಳ ಪಾರ್ಕಿಂಗ್ ವ್ಯವಸ್ಥೆಗೆ ಪರ್ಯಾಯ ಮಾರ್ಗ ಹುಡುಕಬೇಕಾಗಿದೆ.

Leave a Reply

comments

Related Articles

error: