ಮೈಸೂರು

ರಾಜ್ಯ ಮುಕ್ತ ವಿವಿಗೆ ನಾಯಕ ಸಮುದಾಯದವರನ್ನು ನಾಮ ನಿರ್ದೇಶನ ಮಾಡಲು ಒತ್ತಾಯ

ಮೈಸೂರು,ಜು.11 :  ಕರ್ನಾಟಕ ರಾಜ್ಯ ಮುಕ್ತ ವಿವಿಗೆ ಪರಿಶಿಷ್ಟ ಪಂಗಡದ ನಾಯಕ ಸಮಾಜದ ಸದಸ್ಯರನ್ನು ನಾಮ ನಿರ್ದೇಶನ ಮಾಡಬೇಕೆಂದು ಕರ್ನಾಟಕ ರಾಜ್ಯ ನಾಯಕರ ಯುವಸೇನೆ ರಾಜ್ಯಾಧ್ಯಕ್ಷ ದೇವರಾಜ್ ಟಿ. ಕಾಟೂರು  ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಮಂಗಳವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು,  ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ನಿಯಮ ಉಲ್ಲಂಘಿಸಿ ನಾಮ ನಿರ್ದೇಶನ ಮಾಡಿದ್ದು ಇದು ಕಾನೂನು ಬಾಹಿರವಾಗಿದೆ ಎಂದು ಆರೋಪಿಸಿದ ಅವರು, ರಾಜ್ಯ ಮುಕ್ತ ವಿವಿ ಕಾಯ್ದೆ ಅಧ್ಯಾಯ 4(18) (1) (7)ರ ಪ್ರಕಾರ ಶೈಕ್ಷಣಿಕ, ವೈಜ್ಞಾನಿಕ ಮತ್ತು ಆಡಳಿತ ಕ್ಷೇತ್ರಗಳಲ್ಲಿ ಅನುಭವವಿರುವ ವ್ಯವಸ್ಥಾಪನಾ ಮಂಡಳಿಗೆ ನಾಮ ನಿರ್ದೇಶನ ಮಾಡಲು ರಾಜ್ಯ ಸರ್ಕಾರಕ್ಕೆ  ಅವಕಾಶವಿದೆ. ಆದ್ದರಿಂದ ಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ ಸಚಿವರು ಕೂಡಲೇ ಮೈಸೂರು ಭಾಗಕ್ಕೆ ಸೇರಿದ ನಾಯಕ ಸಮುದಾಯದ ಒಬ್ಬ ವ್ಯಕ್ತಿಯನ್ನು ಪರಿಶಿಷ್ಟ ಪಂಗಡದ ಮೀಸಲಾತಿ ಅಡಿಯಲ್ಲಿ ನಾಮ ನಿರ್ದೇಶನ ಮಾಡುವ ಮುಖಾಂತರ ಮೈಸೂರು ಭಾಗದ ನಾಯಕ ಸಮಾಜಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿದರು.

ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ವಿಶ್ವವಿದ್ಯಾನಿಲಯಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿರುವಂತೆ ನಾಟಕ ಮಾಡುತ್ತಿದ್ದು, ಕಾನೂನು ಅರಿತಿದ್ದರೂ ಕೂಡ ಈ ರೀತಿ  ಪರಿಶಿಷ್ಟ  ಪಂಗಡದವರನ್ನು ನೇಮಿಸದೆ ಸಮಾಜಕ್ಕೆ  ಅನ್ಯಾಯ ಮಾಡಿರುವುದು ದುರಾದೃಷ್ಟಕರ. ಮೈಸೂರಿನಲ್ಲಿ  ಮುಕ್ತ ವಿಶ್ವವಿದ್ಯಾನಿಲಯ  ಇದ್ದರೂ ಕೂಡ ಸಿಂಡಿಕೇಟ್  ಸದಸ್ಯರನ್ನು  ಸಚಿವರು ತಮ್ಮ ಸ್ವಕೇತ್ರ ಕೊಪ್ಪಳ  ಮತ್ತು ಧಾರವಾಡದವರನ್ನು ಸದಸ್ಯರನ್ನಾಗಿ ಮಾಡುವುದು ಸರಿಯಲ್ಲ. ಇದರಿಂದ ಸ್ಥಳೀಯರನ್ನು ಕಡೆಗಣಿಸಿ ಬೇರೆ ಜಿಲ್ಲೆಯವರನ್ನು ಮಾಡಿರುವುದು ಅನ್ಯಾಯ ಎಂದು ಆಪಾದಿಸಿದರು.

ಈಗಾಗಲೇ ಆಗಿರುವ ಅನ್ಯಾಯವನ್ನು ಸರಿಪಡಿಸಲು ಪರಿಶಿಷ್ಟ ಪಂಗಡಕ್ಕೆ ಸೇರಿದ ನಾಯಕ ಸಮಾಜದವರ ಕರ್ನಾಟಕ ರಾಜ್ಯ ಮುಕ್ತ ವಿವಿಗೆ ಸಿಂಡಿಕೇಟ್ ಸದಸ್ಯರನ್ನಾಗಿ ನೇಮಿಸಿ ಆದೇಶ ಹೊರಡಿಸಬೇಕು. ಇಲ್ಲವಾದಲ್ಲಿ ಕಾನೂನಿನ ಪ್ರಕಾರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ರಾಜ್ಯ ಉಪಾಧ್ಯಕ್ಷ ಎಸ್.ಶಿವಕುಮಾರ್, ಜಿಲ್ಲಾಧ್ಯಕ್ಷ ಚನ್ನನಾಯಕ,  ಜಿಲ್ಲಾ ಪ್ರಧಾನಕಾರ್ಯದರ್ಶಿ ಹೊಸರಾಮನಹಳ್ಳಿ ಮಂಜು, ನಂಜನಗೂಡು ಹೆಡತಲೆ ಶಿವಕುಮಾರ, ರಾಮನಾಯಕ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.(ವರದಿ : ಕೆ.ಎಂ.ಆರ್)

Leave a Reply

comments

Related Articles

error: