ಮೈಸೂರು

ಚರಂಡಿ ಸೇರಿ ವ್ಯರ್ಥವಾಗುತ್ತಿರುವ ಜೀವಜಲ ಉಳಿಸಿ

ಒಂದು ಪಡೆಯಬೇಕಾದರೆ ಮತ್ತೊಂದು ಕಳೆದುಕೊಳ್ಳಲೇ ಬೇಕು ಎನ್ನುವ ನಿಯಮವೂ ಇಲ್ಲಿ ಅನ್ವರ್ಥ. ಬಡಾವಣೆಗೆ ಸಮರ್ಪಕ ನೀರಿನ ಸರಬರಾಜಾಗಬೇಕೆಂದರೆ ಮುಖ್ಯರಸ್ತೆಯ ಮೇನ್ವಾಲ್ವ್ ನಲ್ಲಿ ಯಥೇಚ್ಚ ನೀರು ಸೋರಿಕೆಯಾಗಲೇಬೇಕು. ಇಲ್ಲವಾದರೆ ಬಡಾವಣೆಯ ಮನೆಗಳಿಗೆ ಸರಿಯಾಗಿ ನೀರು ಸರಬರಾಜಾಗುವುದಿಲ್ಲ ಎನ್ನುವ ಕಾರಣದಿಂದ ದಿನವೂ ಸಾವಿರಾರು ಲೀಟರ್ ಗಟ್ಟಲೇ ನೀರು ಪೋಲಾಗುತ್ತಿದೆ.

ನಗರದ ಟೆರೆಷಿಯನ್ ಕಾಲೇಜಿನ ಸಮೀಪದ ರಾಜ್ ಕುಮಾರ್ ಮುಖ್ಯರಸ್ತೆ ವಾರ್ಡ್ ನಂ.56ರಲ್ಲಿಯೇ ನೀರು ಪೋಲಾಗುವ ದೃಶ್ಯವೂ ‘ಸಿಟಿಟುಡೆ, ಕ್ಯಾಮರಾ ಕಣ್ಣಿಗೆ ಕಂಡು ಬಂದು ಈ ಬಗ್ಗೆ ಪ್ರಸ್ತಾಪಿಸಿದಾಗ ಸ್ಥಳೀಯರು ನೀಡಿದ ಸಬೂಬು ನಿಜಕ್ಕೂ ಆಶ್ಚರ್ಯ ತಂದಿತ್ತು. ಬಡಾವಣೆಯ ಮೇಲ್ಭಾಗದ ನಿವಾಸಿಗಳಿಗೆ ಸಮರ್ಪಕ ನೀರು ಸರಬರಾಜಾಗಬೇಕಾದರೆ ಇಲ್ಲಿಷ್ಟು ನೀರು  (ಏರ್ ಲಾಕ್) ವ್ಯರ್ಥವಾಗಿ ಹರಿದು ಚರಂಡಿ ಸೇರಿಲೇಬೇಕು. ಇಲ್ಲವಾದಲ್ಲಿ ಮೇಲ್ಭಾಗದವರಿಗೆ ನೀರು ಪೂರೈಕೆಯಾಗುವುದಿಲ್ಲ ಎನ್ನುವುದು ಅವರುಗಳು ಕಂಡುಕೊಂಡ ಉತ್ತರ.

ಬಡಾವಣೆಗೆ ವಾರದಲ್ಲಿ ಮೂರು ದಿನದಂತೆ ಮಾದೇವಪುರದ ನೀರು ಸರಬರಾಜು ಕೇಂದ್ರದಿಂದ ನೀರು ಪೂರೈಕೆಯಾಗುತ್ತಿದ್ದು ಅಸಮರ್ಪಕ ಹಾಗೂ ಅವೈಜ್ಞಾನಿಕ ನೀರು ಸರಬರಾಜು ವ್ಯವಸ್ಥೆಯಿಂದ ಕುಡಿಯುವ ಶುದ್ಧ ನೀರು ಚರಂಡಿ ಪಾಲಾಗುವ ಬಗ್ಗೆ ನಾಗರೀಕರು ಬೇಸರ ವ್ಯಕ್ತಪಡಿಸಿದರು.

ಈ ಬಗ್ಗೆ ವಾರ್ಡಿನ ಕಾರ್ಪೋರೇಟರ್ ಸಿ.ಎಸ್. ರಜನಿ ಅಣ್ಣಯ್ಯ ‘ಸಿಟಿಟುಡೆ’ಯೊಂದಿಗೆ ಮಾತನಾಡಿ ಒಳಚರಂಡಿ ತುಂಬಿದ ಒತ್ತಡಕ್ಕೆ ನೀರು ಹೊರ ಹರಿಯುತ್ತದೆ. ಪ್ರತಿದಿನ ಈ ರೀತಿ ಆಗುವುದಿಲ್ಲ. ಎಂದೋ ಒಂದು ದಿನ ರೀತಿ ಸಮಸ್ಯೆ ಕಂಡು ಬರುವುದು ಅಷ್ಟೇ ಎಂದು ದಿವ್ಯ ನಿರ್ಲಕ್ಷ್ಯ ಅಸಮಂಜಸ ಉತ್ತರ ನೀಡಿ. ರಾಜ್ ಕುಮಾರ್ ರಸ್ತೆ ಆಗಿ ನಾಲ್ಕುವರೆ ವರ್ಷ ಕಳೆದಿದ್ದು ರಸ್ತೆಗಾಗಿ ಜಮೀನು ನೀಡಿದ ನಿವಾಸಿಗಳಿಗೆ ಮೂಡಾದಿಂದ ಇನ್ನೂ ನಿವೇಶನ ಮಂಜೂರಾಗಿಲ್ಲ. ಇದರಿಂದ ಅವರು ಮಳೆ ನೀರು ಚರಂಡಿ, ಡ್ರೈನೇಜ್ ಸಂಪರ್ಕಕ್ಕೆ ಅಡ್ಡಿಪಡಿಸಿಸುತ್ತಿದ್ದಾರೆ. ಅಲ್ಲದೇ ಯುಜಿಡಿಯೂ ಒಮ್ಮೊಮ್ಮೆ ಓವರ್ ಫ್ಲೋ ಆಗಿ ಈ ರೀತಿ ಆಗುವುದು. ಸಂತ್ರಸ್ತರಿಗೆ ನಿವೇಶನ ನೀಡುವ ಬಗ್ಗೆ ಸಚಿವ ತನ್ವೀರ್ ಸೇಠ್ ಅವರೊಂದಿಗೆ ಮಾತುಕತೆ ನಡೆಸಲಾಗಿದೆ ಆದಷ್ಟು ತ್ವರಿತವಾಗಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಪ್ರತಿಕ್ರಿಯೆ ನೀಡಿದರು.

ಕಳೆದ ವರ್ಷದಿಂದಲೂ ರಾಜ್ಯದಲ್ಲಿ ಮಳೆ ಕೈಕೊಟ್ಟು ಬರಗಾಲದ ಛಾಯೆ ಎದುರಾಗಿದೆ. ಕಾವೇರಿ ಜಲಾಶಯದ ಮೂಲಗಳು ಬತ್ತಿ ಬರಿದಾಗಿದ್ದು ಪ್ರತಿ ವರ್ಷ ಮಾರ್ಚ್ ಏಪ್ರಿಲ್ ನಲ್ಲಿ ಕಾಡುವ ಕುಡಿಯುವ ನೀರಿನ ಸಮಸ್ಯೆಯು ಈ ಬಾರಿ ಡಿಸೆಂಬರ್ ನಲ್ಲಿಯೇ ಗೋಚರಿಸುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿವೆ. ಪ್ರಸಕ್ತ ಸಾಲಿನಲ್ಲಿ ಜಲಶಯದ ಭಾಗದ ರೈತರಿಗೆ ಉಳುಮೆ ಮಾಡಲು ಸರ್ಕಾರವು ನೀರನ್ನೇ ನೀಡಲಿಲ್ಲ. ಪರಿಸ್ಥಿತಿ ಹೀಗಿರುವಾಗ ಹನಿಹನಿ ನೀರಿಗೂ ತತ್ವಾರವಾಗುವ ಗತಿ ಮೂಡಿದೆ. ಹೀಗಿದಾಗ್ಯೂ ಕೇವಲ ಬಡಾವಣೆಯೊಂದರ ಮೇನ್ವಾಲ್ ನಲ್ಲಿ ಸಾವಿರಾರು ಲೀಟರ್ ಗಟ್ಟಲೇ ನೀರು ಹರಿದು ವ್ಯರ್ಥವಾಗಿ ಚರಂಡಿ ಪಾಲಾಗುತ್ತಿದ್ದು ಈ ಅವ್ಯವಸ್ಥೆಯನ್ನು ಸರಿಪಡಿಸಿ ಜೀವ ಜಲ ರಕ್ಷಣೆ ಮಾಡಬೇಕು ಎನ್ನುವುದು ‘ಸಿಟಿಟುಡೆ’ಯ ಸಾಮಾಜಿಕ ಕಳಕಳಿ.

  • ಕೆ.ಎಂ.ರೇಖಾ ಪ್ರಕಾಶ್

Leave a Reply

comments

Related Articles

error: