ಮೈಸೂರು

ವಿದ್ವಾನ್ ಡಾ. ಗೌರಿಕುಪ್ಪುಸ್ವಾಮಿ ಅವರಿಗೆ ಸಂಗೀತ ಕುಲೋತ್ತುಂಗ ಪ್ರಶಸ್ತಿ ಪ್ರದಾನ

ಸಂಗೀತ ಮಹಾನ್ ಸಾಧನೆ, ಸಾಧನೆಗೆ ಉತ್ತಮ ಗುರು ಲಭಿಸುವುದು ವಿರಳ. ಡಾ. ಗೌರಿ ಕುಪ್ಪುಸ್ವಾಮಿಯವರು ಶ್ರೇಷ್ಠ ಗುರುಗಳಲ್ಲಿ ಒಬ್ಬರಾಗಿದ್ದು ಇಂತಹ ಗುರು ಪಡೆದ ಶಿಷ್ಯವೃಂದವೇ ಪುಣ್ಯವೆಂದು ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಕಲೆಗಳ ವಿವಿಯ ಕುಲಪತಿ ಡಾ. ಸರ್ವಮಂಗಳ ನುಡಿದರು.

ಅವರು, ನಗರದ ಜಗನ್ಮೋಹನ ಅರಮನೆಯಲ್ಲಿ ಮೈಸೂರಿನ ಕಲಾಸಂದೇಶ ಪ್ರತಿಷ್ಠಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶುಕ್ರವಾರದಿಂದ ಮೂರು ದಿನಗಳ ಕಾಲ ಜರುಗುವ ಕಲಾಭಿವರ್ಧನ-2016ಕ್ಕೆ ಚಾಲನೆ ನೀಡಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವುದರೊಂದಿಗೆ ಲಯ, ತಾಳ, ಬೆರಳ ಏಣಿಕೆ ನಿರ್ವಹಣೆ, ಆಂಗಿಕ ಭಂಗಿಯನ್ನು ಕಲಿಸಿ ಉತ್ತಮ ಶಿಷ್ಯಕೋಟಿಯನ್ನು ಸಂಪಾದಿಸಿದ್ದಾರೆ. ಇವರಿಗೆ ಪ್ರಸಕ್ತ ಸಾಲಿನ ಸಂಗೀತ ಕಲೋತ್ತುಂಗ ಪ್ರಶಸ್ತಿ ಲಭಿಸಿರುವುದು ಪ್ರಶಂಸಾರ್ಹವೆಂದು ಸಂತೋಷ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪೂರ್ಣ ಕುಂಭದೊಂದಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತ ವಿದ್ವಾನ್ ಡಾ. ಗೌರಿ ಕುಪ್ಪುಸ್ವಾಮಿ ಅವರನ್ನು ವೇದಿಕೆಗೆ ಕರೆತಂದು ಸಂಗೀತ ಕಲೋತ್ತುಂಗ ಪ್ರಶಸ್ತಿ ನೀಡಿ ಇಪ್ಪತ್ತೈದು ಸಾವಿರ ಗೌರವ ಧನ ಹಾಗೂ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಪಿಟೀಲು ವಿದ್ವಾಂಸ ಎಚ್.ಕೆ.ನರಸಿಂಹಮೂರ್ತಿ, ಕೊಳಲು ವಾದಕ ಕೆ.ಪಿ. ಉಪಾಧ್ಯಾಯ, ಮೃದಂಗ ವಾದಕ ಜಿ.ಎಸ್. ರಾಮಾನುಜಂ, ಡಾ. ಡಿ. ಉಮಾಪತಿ, ವೀಣಾ ವಿದ್ವಾಂಸ ಆರ್.ಕೆ. ಪದ್ಮನಾಭ, ವಿದುಷಿ ಡಾ. ಸುಕನ್ಯಾ ಪ್ರಭಾಕರ್ ಗಾಯಕಿ ರಾಜಲಕ್ಷ್ಮೀ, ಶ್ರೀಧರ್, ಆಕಾಶವಾಣಿ ಸಂಗೀತ ಕಾರ್ಯನಿರ್ವಾಹಕ ವಿದ್ವಾನ್ ಬಳ್ಳಾರಿ ರಾಘವೇಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Leave a Reply

comments

Related Articles

error: