ಮೈಸೂರು

ಪಕ್ಷವನ್ನು ಗೆಲ್ಲಿಸುವಲ್ಲಿ ಕಾರ್ಯಕರ್ತರ ಪಾತ್ರ ಮಹತ್ವವಾಗಿದೆ : ಸುರೇಶ್ ಕುಮಾರ್

ಮೈಸೂರು,ಜು.11:-2018ರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು ಎಲ್ಲ ರಾಜಕೀಯ ಪಕ್ಷಗಳಲ್ಲೂ ಕಾರ್ಯಚಟುವಟಿಕೆಗಳು ಗರಿಗೆದರಿವೆ. ಭಾರತೀಯ ಜನತಾಪಕ್ಷವೂ ತಳಮಟ್ಟದಲ್ಲಿಯೇ ಪಕ್ಷವನ್ನು ಸಂಘಟಿಸುತ್ತಿದ್ದು,  ತಿಲಕ್ ನಗರದಲ್ಲಿ ಭಾರತೀಯ ಜನತಾಪಕ್ಷದ ವತಿಯಿಂದ  ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಮೈಸೂರು ನಗರ ಬಿಜೆಪಿ ವಿಸ್ತಾರಕ, ಮಾಜಿ ಸಚಿವ ಸುರೇಶ್ ಕುಮಾರ್ ನಿರ್ವಹಿಸಿದರು.

ತಿಲಕ್ ನಗರದ 43ನೇ ವಾರ್ಡ್ ನ 2ನೇ ಮುಖ್ಯರಸ್ತೆಯ ಐದನೇ ಕ್ರಾಸ್ ನಲ್ಲಿರುವ ಗಂಗಾಪರಮೇಶ್ವರಿ ಹತ್ತು ಜನರ ಸಮುದಾಯ ಭವನದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡ ಮಾಜಿ ಸಚಿವ ಸುರೇಶ್ ಕುಮಾರ್ ಪಕ್ಷ ಸಂಘಟನೆಯನ್ನು ಯಾವ ರೀತಿ ಮಾಡಬೇಕು. ತಳಮಟ್ಟದಿಂದಲೇ ಪಕ್ಷವನ್ನು ಯಾವ ರೀತಿ ಕಟ್ಟಬೇಕು. ಹೊಸಬರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಳ್ಳುವಾಗ ಯಾವ ರೀತಿಯ ನಿಯಮಗಳನ್ನು ಅನುಸರಿಸಬೇಕು, ಪಕ್ಷವನ್ನು ಗೆಲ್ಲಿಸುವಲ್ಲಿ ಕಾರ್ಯಕರ್ತರು ಯಾವ ರೀತಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂಬಿತ್ಯಾದಿ ಮಾಹಿತಿಗಳನ್ನು ನೀಡಿದರಲ್ಲದೇ, ಪಕ್ಷವನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರ ಪಾತ್ರ ಮಹತ್ತರವಾದುದು ಎಂಬುದನ್ನು ತಿಳಿಸಿಕೊಟ್ಟರು. ಬಳಿಕ ಮನೆಮನೆಗೆ ತೆರಳಿ ಸ್ಟಿಕ್ಕರ್ ಅಂಟಿಸಿದರಲ್ಲದೇ, ರಾಜ್ಯ ಸರ್ಕಾರದ ವೈಫಲ್ಯ ವನ್ನು ಜನರಿಗೆ ತಿಳಿಸಿ, ಕೇಂದ್ರಸರ್ಕಾರದ ಸಾಧನೆಗಳನ್ನು, ಜನಪರ ಯೋಜನೆಗಳನ್ನು ಮನವರಿಕೆ ಮಾಡಿಕೊಟ್ಟರು.

ಈ ಸಂದರ್ಭ ಪಾಲಿಕೆಯ ಹಣಕಾಸು ಮತ್ತು ನಗರ ಯೋಜನೆಯ ಅಧ್ಯಕ್ಷ ನಂದೀಶ್ ಪ್ರೀತಂ, ತಿಲಕ್ ನಗರ ವಿಸ್ತಾರಕ ಪ್ರಭಾಕರ ಶಿಂಧೆ, ಮಂಜುನಾಥ್, ವಾರ್ಡ್ ಅಧ್ಯಕ್ಷ ರಂಗಸ್ವಾಮಿ, ಶಕ್ತಿಕೇಂದ್ರದ ಅಧ್ಯಕ್ಷ ವಿನಯ್ ಸೇರಿದಂತೆ ಹಲವು ಕಾರ್ಯಕರ್ತರು ಪಾಲ್ಗೊಂಡಿದ್ದರು. (ಎಸ್.ಎಚ್)

Leave a Reply

comments

Related Articles

error: