ಕರ್ನಾಟಕಪ್ರಮುಖ ಸುದ್ದಿ

ಭೀಕರ ರಸ್ತೆ ಅಪಘಾತ: ಐವರ ದುರ್ಮರಣ

ಪ್ರಮುಖ ಸುದ್ದಿ, ರಾಜ್ಯ(ರಾಮನಗರ), ಜು.11: ಬೆಂಗಳೂರು- ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ -209 ರಲ್ಲಿ ಹಾಲಿನ ಕ್ಯಾಂಟರ್ ಹಾಗೂ ಸ್ವಿಫ್ಟ್ ಕಾರಿನ ನಡುವೆ ಭೀಕರ ರಸ್ತೆ ಅಪಘಾತ ನಡೆದು ಐವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕನಕಪುರ ತಾಲೂಕಿನ ತೊಪ್ಪಗಾನಹಳ್ಳಿ ಬಳಿ ನಡೆದಿದೆ.

ಕನಕಪುರ ಕಡೆಯಿಂದ ಹೊರಟಿದ್ದ ಸ್ವಿಫ್ಟ್ ಕಾರು ಹಾಗೂ ಬೆಂಗಳೂರು ಕಡೆಯಿಂದ ಬರುತ್ತಿದ್ದ ಹಾಲಿನ ಕ್ಯಾಂಟರ್ ಮುಖಾಮುಖಿ ಡಿಕ್ಕಿ ಹೊಡೆದಿವೆ. ಘಟನೆಯಲ್ಲಿ ಬೆಂಗಳೂರಿನ ಸಂತೋಷ್, ಅನಿಲ್ ಕುಮಾರ್, ಚಂದ್ರು, ಆಂಧ್ರಪ್ರದೇಶ ಮೂಲದ ಚಾಲಕ ರಾಜು ಹಾಗೂ ಮತ್ತೊಬ್ಬ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಕ್ಯಾಂಟರ್ ಚಾಲಕ ಕಾಲು ಮುರಿತಕ್ಕೆ ಒಳಗಾಗಿದ್ದಾನೆ. ಘಟನೆಯಲ್ಲಿ ಸ್ವಿಫ್ಟ್ ಕಾರು ಹಾಗೂ ಕ್ಯಾಂಟರ್ ಎರಡೂ ಸಹ ಕಚ್ಚಿಕೊಂಡಿದ್ದ ವೇಳೆ ಕಾರು ನಜ್ಜುಗುಜ್ಜಾಗಿದ್ದು ಐವರ ಮೃತ ದೇಹಗಳು ಕಾರಿನಲ್ಲಿ ಸಿಲುಕಿಕೊಂಡಿದ್ದವು. ಪೊಲೀಸರು  ಹಾಗೂ ಸಾರ್ವಜನಿಕರು ಹರಸಾಹಸ ಪಟ್ಟು ಮೃತದೇಹಗಳನ್ನು ಹೊರತೆಗೆದಿದ್ದು ಕನಕಪುರ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಕೆ.ಎ.01 ಎ.ಎಫ್‌ 7190 ಸ್ವಿಫ್ಟ್ ಡಿಸೈರ್‌ ಕಾರು ಅಪಘಾತದಲ್ಲಿ ನಜ್ಜುಗುಜ್ಜಾಗಿದ್ದು ಕ್ಯಾಂಟರ್‌ ಕೆಳಭಾಗದಲ್ಲಿ ಸಿಲುಕಿಕೊಂಡಿದೆ. ಜೆ.ಸಿ.ಬಿ. ಮತ್ತು ಕ್ರೈನ್‌ ವಾಹನಗಳನ್ನು ಬಳಸಿ ಲಾರಿಯನ್ನು ಮೇಲಕ್ಕೆ ಎತ್ತಿ ಅದರಡಿಯಲ್ಲಿದ್ದ ಕಾರನ್ನು ಹೊರ ತೆಗೆಯಲಾಯಿತು. ಕಾರಿನಲ್ಲಿದ್ದ ಇಬ್ಬರ ಮೃತದೇಹಗಳು ಕಾರಿನ ಬಾಡಿಗೆ ಕಚ್ಚಿಕೊಂಡಿದ್ದು ಕ್ರೇನ್‌ ಮತ್ತು ಜೆ.ಸಿ.ಬಿ. ಸಹಾಯದಿಂದ ಶವಗಳನ್ನು ಹೊರ ತೆಗೆಯಲಾಯಿತು.

ಸಾತನೂರು ಸಮೀಪದ ಕಬ್ಬಾಳಮ್ಮ ದೇವಾಲಯದಲ್ಲಿ ಪೂಜೆ ಮುಗಿಸಿಕೊಂಡು ವಾಪಸ್ಸು ಬೆಂಗಳೂರಿಗೆ ತೆರಳುತ್ತಿದ್ದರು ಎಂದು ಪೊಲೀಸರು ತಿಳಿಸಿದರು. ಎಸ್ಪಿ ಬಿ.ರಮೇಶ್, ಗ್ರಾಮಾಂತರ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ನಟರಾಜು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಪಘಾತಗೊಂಡ ಎರಡು ವಾಹನಗಳನ್ನು ಠಾಣೆಗೆ ಸ್ಥಳಾಂತರಿಸಿದ್ದಾರೆ. ಬೆಂಗಳೂರು ಕನಕಪುರ ರಸ್ತೆಯ ಮಧ್ಯಭಾಗದಲ್ಲಿ ಅಪಘಾತಗೊಂಡ ವಾಹನ ನಿಂತಿದ್ದರಿಂದ ಎರಡು ಕಡೆಯ ವಾಹನ ಸಂಚಾರ ಸ್ಥಗಿತಗೊಂಡು ಸುಮಾರು ಒಂದು ಗಂಟೆಗಳ ಕಾಲ ವಾಹನ ಸಂಚಾರ ಅಸ್ಥವ್ಯಸ್ತಗೊಂಡಿತ್ತು. ಕೊನೆಗೆ ಕಾದು ಸುಸ್ತಾದ ಜನತೆ ಪಕ್ಕದಲ್ಲಿದ್ದ ಪೈಪ್‌ಲೈನ್‌
ರಸ್ತೆ ಮಾರ್ಗವಾಗಿ ಹೊರಟರು. (ವರದಿ: ಕೆ.ಎಸ್, ಎಸ್.ಎನ್, ಎಲ್.ಜಿ)

Leave a Reply

comments

Related Articles

error: