ಮೈಸೂರು

ಪದೇ ಪದೇ ಮುಷ್ಕರ ಮಾಡಿದರೆ ಕಾನೂನು ರೀತಿ ಕ್ರಮ : ಜಿಲ್ಲಾಧಿಕಾರಿ ಡಿ.ರಂದೀಪ್

ಮೈಸೂರು, ಜುಲೈ 11 : ಪದೇ ಪದೇ ಮುಷ್ಕರ ಮಾಡಿ ಪೆಟ್ರೋಲಿಯಂ ಉತ್ಪನ್ನಗಳ ಸರಬರಾಜು ಸ್ಥಗಿತಗೊಳಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸುವುದು ಅನಿವಾರ್ಯವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ರಂದೀಪ್ ಡಿ. ಅವರು ತಿಳಿಸಿದ್ದಾರೆ.

ಪೆಟ್ರೋಲ್ ಮತ್ತು ಡೀಸೆಲ್ ಬಂಕ್ ಮಾಲೀಕರು ಕಳೆದ ಜೂನ್ 16 ರಂದು ಮತ್ತು ಜುಲೈ 5 ರಂದು ಕಾನೂನು ಬಾಹಿರವಾಗಿ ಮುಷ್ಕರ ನಡೆಸಿದ್ದು, ಸಾರ್ವಜನಿಕರಿಗೆ ಪೆಟ್ರೋಲ್ ಮತ್ತು ಡೀಸೆಲ್ ಸರಬರಾಜಿನಲ್ಲಿ ತೊಂದರೆ ಆಗಿದೆ. ಮೈಸೂರು ಜಿಲ್ಲೆಯ ಪೆಟ್ರೋಲ್ ಮತ್ತು ಡೀಸೆಲ್ ವಿತರಕರು ಜುಲೈ 12 ರಂದು ಮತ್ತೆ ಮುಷ್ಕರ ನಡೆಸುವುದಾಗಿ ತಿಳಿದು ಬಂದಿದೆ.

ಕೇಂದ್ರ ಸರ್ಕಾರದ ತೈಲಾ ಕಂಪನಿಗಳ ಅಧಿಕೃತ ಏಜೆನ್ಸಿಗಳಾಗಿರುವ ಪೆಟ್ರೋಲ್ ಮತ್ತು ಡೀಸೆಲ್ ವಿತರಕರು ಅನಧಿಕೃತ ಮತ್ತು ಕಾನೂನು ಬಾಹಿರ ಮುಷ್ಕರ ಮಾಡಿ ಅಗತ್ಯ ವಸ್ತುಗಳಾದ ಪೆಟ್ರೋಲಿಯಂ ಉತ್ಪನ್ನಗಳ ಸರಬರಾಜಿನಲ್ಲಿ ವ್ಯತ್ಯಯ ಉಂಟು ಮಾಡುವುದು ಅಗತ್ಯ ವಸ್ತುಗಳ ಕಾಯಿದೆ 1955 ಮತ್ತು ಕರ್ನಾಟಕ ಅಗತ್ಯ ಸೇವೆಗಳ ನಿರ್ವಾಹಣಾ ಕಾಯ್ದೆ 2013, ದಿ. ಮೋಟಾರ್ ಸ್ಪಿರಿಟ್ ಅಂಡ್ ಹೈ ಸ್ಪೀಡ್ ಡೀಸೆಲ್ (ರೆಗ್ಯುಲೇಸನ್ ಆಫ್ ಸಫ್ಲೈ, ಡಿಸ್ಟ್ರಿಬ್ಯೂಷನ್ ಅಂಡ್ ಪ್ರಿವೆನ್ಶನ್ ಆಫ್ ಮಾಲ್ ಪ್ರಾಕ್ಟೀಸ್ ಅರ್ಡರ್ 1998 ಮತ್ತು ಕರ್ನಾಟಕ ಅಗತ್ಯ ವಸ್ತುಗಳ (ಲೆಕ್ಕ ಪತ್ರ ನಿರ್ವಹಣೆ ದಾಸ್ತಾನು ಮತ್ತು ಬೆಲೆ ಪ್ರಕಟಣೆ) ಆದೇಶ 1981 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿರುತ್ತದೆ.

ಪೆಟ್ರೋಲ್ ಮತ್ತು ಡೀಸೆಲ್ ವಿತರಕರು ಅಹವಾಲುಗಳಿದ್ದಲ್ಲಿ ನ್ಯಾಯಯುತ ಮಾರ್ಗದಲ್ಲಿ ಬಗೆಹರಿಸಿಕೊಳ್ಳಲು ಅವಕಾಶವಿರುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ತೈಲ ಕಂಪನಿಗಳ ಮೂಲಕ ಅಥವಾ ಜಿಲ್ಲಾಧಿಕಾರಿಗಳ ಮೂಲಕ ಅಹವಾಲು ಸಲ್ಲಿಸಬಹುದಾಗಿದೆ. ಇದನ್ನು ಬಿಟ್ಟು ಮತ್ತೆ ಮುಷ್ಕರ ಮಾಡಿದರೆ ಪೆಟ್ರೋಲಿಯಂ ಉತ್ಪನ್ನಗಳ ಸರಬರಾಜು ಸ್ಥಗಿತಗೊಳಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ರಂದೀಪ್ ತಿಳಿಸಿದ್ದಾರೆ.

-ಎನ್.ಬಿ.

Leave a Reply

comments

Related Articles

error: