ಪ್ರಮುಖ ಸುದ್ದಿಮೈಸೂರು

ಪಕ್ಷದ ಬಲವರ್ಧನೆಗಾಗಿ ದುಡಿಯಿರಿ: ಬಿಜೆಪಿ ಕಾರ್ಯಕರ್ತರಿಗೆ ಅರವಿಂದ ಲಿಂಬಾವಳಿ ಕರೆ

ರಾಜ್ಯದಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ 2018ರ ವಿಧಾನಸಭಾ ಚುನಾವಣೆ ಮಹತ್ವದ್ದಾಗಿರುವುದರಿಂದ ಕಾರ್ಯಕರ್ತರು ಬೂತ್ ಮಟ್ಟಗಳಲ್ಲಿ ಪಕ್ಷದ ಮತದಾರರನನ್ನು ಗುರುತಿಸಿ, ಮತದಾರರ ಪಟ್ಟಿಯಲ್ಲಿ ಇಲ್ಲದಿದ್ದರೆ ಸೇರಿಸುವ ಕೆಲಸ ಮಾಡಿ ಪಕ್ಷ ಬಲವರ್ಧನೆಗೆ ಮುಂದಾಗಬೇಕೆಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ನೀಡಿದರು.

ನಗರದ ಇಟ್ಟಿಗೆಗೂಡಿನಲ್ಲಿರುವ ಚಿನ್ನಮ್ಮ ಚೆನ್ನಬಸಪ್ಪ ಕಲ್ಯಾಣ ಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಬಿಜೆಪಿ ನಗರ ಘಟಕದ ಕಾರ್ಯಕಾರಿಣಿಯನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ಪಕ್ಷವನ್ನು ತಳಮಟ್ಟದಿಂದ ಕಟ್ಟುವ ಕೆಲಸವಾಗಬೇಕಿರುವುದರಿಂದ ಎಲ್ಲ ಭಾಗಗಳಲ್ಲೂ ಬೂತ್ ಮಟ್ಟದ ಸಮಿತಿಗಳನ್ನು ರಚಿಸಿ, ನಮ್ಮ ಮತದಾರರನ್ನು ಗುರುತಿಸುವ ಕೆಲಸವಾಗಬೇಕು. ಅವರ ಹೆಸರು ಮತದಾರರ ಪಟ್ಟಿಯಲ್ಲಿಲ್ಲದಿದ್ದರೆ, ಬೇರೆಡೆಗೆ ಸ್ಥಳಾಂತರವಾಗಿದ್ದರೆ, ಪಟ್ಟಿಯಿಂದ ಹೆಸರು ಬಿಟ್ಟುಹೋಗಿದ್ದರೆ ಅಂತಹವರನ್ನು ಪತ್ತೆಹಚ್ಚಿ ಪರಿಷ್ಕರಣೆ ಮಾಡುವ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕು. ಇದರಿಂದ ಪಕ್ಷದ ಶಕ್ತಿ ತಳಮಟ್ಟದಲ್ಲಿ ವೃದ್ಧಿಸುವುದಲ್ಲದೆ ಯಡಿಯೂರಪ್ಪ ಅವರನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿಸಲು ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಿದರು.

3 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸ್ಥಾನೀಯ ಸಮಿತಿಗಳ ಆಯ್ಕೆಗೆ ಅನುಮೋದನೆ ದೊರೆತಿಲ್ಲ. ಇದನ್ನು ಮೊದಲು ಸರಿಪಡಿಸಬೇಕು. ಪಕ್ಷದ ಎಲ್ಲ ಮೋರ್ಚಾಗಳು ಒಂದಾಗಿ ಕೆಲಸ ಮಾಡಬೇಕು. ಇಂದು ತಂತ್ರಜ್ಞಾನದ ಅಭಿವೃದ್ಧಿಯಿಂದಾಗಿ ಎಲ್ಲರ ಬಳಿಯೂ ಸ್ಮಾರ್ಟ್‌ಫೋನ್‌ಗಳಿರುವುದರಿಂದ ಸೋಶಿಯಲ್ ಮೀಡಿಯಾಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಪಕ್ಷದ ಯೋಜನೆಗಳು, ಕಾರ್ಯಕ್ರಮಗಳನ್ನು ತಿಳಿಸುವ ಮೂಲಕ ಜನರಿಗೆ ಹತ್ತಿರವಾಗುವ ಕೆಲಸ ಮಾಡಬೇಕು. ಈ ಉದ್ದೇಶದಿಂದ ಕಾರ್ಯಕರ್ತರ ನೈಪುಣ್ಯತೆಯನ್ನು ಹೆಚ್ಚಿಸುವ ಸಲುವಾಗಿ ತರಬೇತಿ ಶಿಬಿರಗಳನ್ನು ಆಯೋಜಿಸುತ್ತಿದ್ದು ಕಾರ್ಯಕರ್ತರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ವಿವಿಧ ಕಾರ್ಯಕ್ರಮಗಳು: ಬಾಬಾ ಸಾಹೇಬ್ ಅಂಬೇಡ್ಕರ್ ಅವರ 125ನೇ ಜಯಂತಿ ಅಂಗವಾಗಿ ಪಕ್ಷದ ವತಿಯಿಂದ ಹಲವು ಜನಪರ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಜಿಲ್ಲೆಯ ಎಲ್ಲ ಪ್ರಮುಖ ಕೇಂದ್ರಗಳಲ್ಲೂ ಸ್ವಚ್ಛತಾ ಅಭಿಯಾನ, ಆರೋಗ್ಯ ಶಿಬಿರ ಹಾಗೂ ದಲಿತರ ಸಮಾವೇಶಗಳನ್ನು ಆಯೋಜಿಸಲಾಗುತ್ತಿದೆ. ಪ್ರತಿಯೊಬ್ಬರು ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ತಿಳಿಯಲು ಅವರ ಯಾವುದಾದರೂ ಒಂದು ಪುಸ್ತಕವನ್ನು ಓದುವಂತೆ ಸೂಚನೆ ನೀಡಲಾಗಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಹನೀಯರ ತತ್ವಾದರ್ಶಗಳನ್ನು ಯುವಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ವಾಲ್ಮೀಕಿ, ಕನಕದಾಸರ ಜಯಂತಿಯನ್ನು ಸರ್ಕಾರವೇ ಆಚರಿಸುವಂತೆ ಮಾಡಿ, ರಜೆಯನ್ನೂ ಘೋಷಿಸಿದ್ದರು ಎಂದು ತಿಳಿಸಿದರು.

ಕಾರ್ಯತಂತ್ರ ರೂಪಿಸಿ: ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ಮುಂದಿನ ಬಜೆಟ್ ಮಂಡನೆಗೆ ಸಿದ್ಧತೆ ನಡೆಸಿದ್ದು, ಚುನಾವಣೆ ದೃಷ್ಟಿಯಿಂದ ಹಲವು ಕಾರ್ಯಕ್ರಮಗಳನ್ನು ಘೋಷಣೆ ಮಾಡಲಿದೆ. ಇದಕ್ಕೆ ಪ್ರತಿಯಾಗಿ ಪಕ್ಷದ ಕಾರ್ಯಕ್ರಮಗಳು, ಯೋಜನೆಗಳನ್ನು ರೂಪಿಸಿ ಮತದಾರರ ಮುಂದಿಡಬೇಕು. ಅವರ ಯೋಜನೆಗಳು ಹಾಗೂ ಕಾರ್ಯಕ್ರಮಗಳಿಂತ ಭಿನ್ನವಾಗಿ ಕಾರ್ಯತಂತ್ರ ರೂಪಿಸಬೇಕು. ಯಡಿಯೂರಪ್ಪ ಅವರು ರಾಜ್ಯದ ಜನಪ್ರಿಯ ನಾಯಕರಾಗಿದ್ದು, ಅವರನ್ನು ಮುಖ್ಯಮಂತ್ರಿಯನ್ನಾಗಿಸಲು ಜನರು ಅಪೇಕ್ಷೆ ವ್ಯಕ್ತಪಡಿಸುತ್ತಿದ್ದು ಅದರಂತೆ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಸಂಸದ ಪ್ರತಾಪ್‌ ಸಿಂಹ, ಬಿಜೆಪಿ ನಗರಾಧ್ಯಕ್ಷ ಮಂಜುನಾಥ್, ಉಪ ಮೇಯರ್ ವನಿತಾ ಪ್ರಸನ್ನ, ಮೈ.ವಿ.ರವಿಶಂಕರ್, ಯಶಸ್ವಿನಿ ಸೋಮಶೇಖರ್, ನಂದೀಶ್ ಪ್ರೀತಮ್, ಮುಡಾ ಮಾಜಿ ಅಧ್ಯಕ್ಷ ನಾಗೇಂದ್ರ, ಬಸಪ್ಪಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

 

Leave a Reply

comments

Related Articles

error: