ದೇಶಪ್ರಮುಖ ಸುದ್ದಿವಿದೇಶ

ಗೋವಾದಲ್ಲಿ ಬ್ರಿಕ್ಸ್: ಮೋದಿ-ಪುಟಿನ್ ಮಹತ್ವದ ಮಾತುಕತೆ ಆರಂಭ

ಬ್ರೆಜಿ಼ಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ ಒಕ್ಕೂಟದ ಬ್ರಿಕ್ಸ್ ಸಮಾವೇಶ ಗೋವಾದಲ್ಲಿ ಇಂದು ಆರಂಭವಾಗಿದೆ. ರಷ್ಯಾದ ಅಧ್ಯಕ್ಷ ವ್ಲಾಟಿಮೀರ್ ಪುಟಿನ್ ಅವರ ಮಹತ್ವಕಾಂಕ್ಷೆಯಂತೆ ರೂಪುಗೊಂಡಿರುವ ಈ ಒಕ್ಕೂಟವು ವಿಶ್ವದ ಹಲವು ಕ್ಷೇತ್ರಗಳಲ್ಲಿ ಅಮೆರಿಕದ ಪ್ರಾಬಲ್ಯವನ್ನು ಪರಿಣಾಮಕಾರಿಯಾಗಿ ತಡೆಯಬಲ್ಲದು ಎಂದೇ ಹೇಳಲಾಗುತ್ತದೆ.

ಇದೇ ಸದಾಶಯದೊಂದಿಗೆ ರೂಪುಗೊಂಡ ಈ ಒಕ್ಕೂಟದಲ್ಲಿ ರಷ್ಯಾ ಮತ್ತು ಭಾರತ ಅತ್ಯಂತ ರಚನಾತ್ಮಕ ಪಾತ್ರ ವಹಿಸುತ್ತಿವೆ. ಆದರೆ, ಚೀನಾದ ಭಿನ್ನ ನಿಲುವು ಒಕ್ಕೂಟದಲ್ಲಿ ಮುಖ್ಯವಾಗಿ ದಕ್ಷಿಣ ಏಷ್ಯಾದ ಶಾಂತಿ ಸ್ಥಿರತೆಗೆ ಸವಾಲೊಡ್ಡುವಂತಿದೆ. ಚೀನಾ-ಪಾಕಿಸ್ತಾನ ಸ್ನೇಹ ದಿನೇ ದಿನೇ ಗಟ್ಟಿಯಾಗುತ್ತಿರುವುದು ಮತ್ತು ರಷ್ಯಾ ಕೂಡ ಪಾಕಿಸ್ತಾನದ ನೆಲದಲ್ಲಿ ತನ್ನ ಸೇನೆಯನ್ನು ಸಮರಾಭ್ಯಾಸಕ್ಕೆ ನಿಯೋಜಿಸಿರುವುದು ಭಾರತಕ್ಕೆ ಸವಾಲೊಡ್ಡುವ ವಿಷಯವಾಗಿದೆ.

ಹೀಗಿರುವಾಗ ಭಾರತದ ಸಾಂಪ್ರದಾಯಕ ಮಿತ್ರರಾಷ್ಟ್ರ ರಷ್ಯಾ, ಭಾರತ-ಚೀನಾ ಸಂಬಂಧದ ಕುರಿತು ತಳೆಯಬಹುದಾದ ನಿಲುವು ಮಹತ್ವ ಪಡೆದುಕೊಳ್ಳುತ್ತದೆ. ಸೊವಿಯತ್ ಒಕ್ಕೂಟ ಅಸ್ತಿತ್ವದಲ್ಲಿದ್ದ ಕಾಲದಿಂದಲೂ ಭಾರತ ಮತ್ತು ರಷ್ಯಾ ಪರಸ್ಪರ ಸಹಕಾರಿ ನಿಲುವು ತೋರುತ್ತಾ ಬಂದಿವೆ. ಪ್ರಸ್ತುತ ವಿಶ್ವದಲ್ಲಿ ಬಣ ರಾಜಕೀಯ ಮಹತ್ವ ಕಳೆದುಕೊಂಡಿದ್ದರೂ ವಿಶ್ವದ ಬೃಹತ್ ಸೇನಾ ಶಕ್ತಿಗಳಾದ ಅಮೆರಿಕ, ರಷ್ಯಾ, ಚೀನಾ ನಡುವೆ ಬಹಿರಂಗ ಪೈಪೋಟಿ ನಡೆಯುತ್ತಿದೆ. ಸಿರಿಯಾ ವಿಷಯದಲ್ಲಿ ಅಮೆರಿಕ ಮತ್ತು ರಷ್ಯಾ ತಮ್ಮ ತಮ್ಮ ಸೇನೆಗಳನ್ನು ಯುದ್ಧಸನ್ನದ್ಧ ಸ್ಥಿತಿಯಲ್ಲಿರಿಸಿವೆ. ಇಂತಹ ಪರಿಸ್ಥಿತಿಯಲ್ಲಿ ಭಾರತ-ರಷ್ಯಾ-ಚೀನಾ ಸಂಬಂಧಗಳು ವಿಶ್ವಶಾಂತಿ ಸಹಬಾಳ್ವೆ ದೃಷ್ಟಿಯಿಂದ ಮಹತ್ವ ಪಡೆದುಕೊಳ್ಳುತ್ತವೆ.

ಪ್ರಪಂಚದ ಯಾವುದೆ ಭಾಗದಲ್ಲಿ ಭಯೋತ್ಪಾದನೆ ನಡೆದರೂ ಪಾಕಿಸ್ತಾನದ ಸಂಬಂಧವಿರುವುದು ಸಾಕ್ಷಿಸಮೇತ ಧೃಢೀಕರಣಗೊಳ್ಳುತ್ತಿದೆ. ವಿಶ್ವದ ಹಲವು ರಾಷ್ಟ್ರಗಳು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡುತ್ತಿದ್ದರೂ ಚೈನಾ ಮಾತ್ರ ಪಾಕಿಸ್ತಾನದ ರಕ್ಷಣೆಗೆ ನಿಂತಿದೆ. ಭಾರತ ಮಾತ್ರವಲ್ಲದೇ ಬಾಂಗ್ಲಾದೇಶ, ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ನಡೆದ ಭಯೋತ್ಪಾದಕ ದಾಳಿಗಳಲ್ಲೂ ಪಾಕಿಸ್ತಾನದ ಸಂಬಂಧವಿರುವುದು ಧೃಢಪಟ್ಟಿದೆ. ಇದು ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಶಾಂತಿ ಸಾಮರಸ್ಯ ಮತ್ತು ಅಭಿವೃದ್ಧಿಗೆ ಕಂಟವಾಗಿದೆ.

ಹೀಗಿದ್ದರೂ ಚೀನಾ, ಪಾಕಿಸ್ತಾನಕ್ಕೆ ಬೆಂಬಲವಾಗಿ ನಿಂತಿದೆ. ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ವಿಟೊ ಅಧಿಕಾರ ಹೊಂದಿರುವ ಚೀನಾ ದೇಶವು ಪಾಕಿಸ್ತಾನದ ಭಯೋತ್ಪಾದಕರ ರಕ್ಷಣೆಗೆ ತನ್ನ ಅಧಿಕಾರವನ್ನು ಬಳಸಿಕೊಳ್ಳುತ್ತಿದೆ. ಇದು ರಷ್ಯಾಗೆ ಒಪ್ಪಿತವಲ್ಲದಿದ್ದರೂ ಚೀನಾವನ್ನು ನೇರವಾಗಿ ಎದುರಿಸುವ ಸ್ಥಿತಿಯಲ್ಲಿ ರಷ್ಯಾ ಇಲ್ಲ.

ಏಕೆಂದರೆ ಅಮೆರಿಕದ ರಾಜಕೀಯ ಪ್ರಾಬಲ್ಯ ತಡೆಯುವುದೇ ರಷ್ಯಾಗೆ ಮೊದಲ ಆದ್ಯತೆಯಾಗಿದೆ. ಸಿರಿಯಾದಲ್ಲಿ ಅಮೆರಿಕದ ಪಟ್ಟುಗಳಿಗೆ ಪ್ರತಿಪಟ್ಟುಗಳನ್ನು ಒಡ್ಡಿ ನೇರಾನೇರ ಸಂಘರ್ಷಕ್ಕೆ ನಿಂತಿರುವ ರಷ್ಯಾ, ಪೂರ್ವ ಏಷ್ಯಾದಲ್ಲಿ ದಕ್ಷಿಣ ಚೀನಾ ಸಮುದ್ರದಲ್ಲಿ ಜಂಟಿ ನೌಕಾ ಸಮರಾಭ್ಯಾಸ ನಡೆಸುವ ಮೂಲಕ ಚೀನಾ ಜತೆ ನಿಂತು ಅಮೆರಿಕವು ಏಷ್ಯಾದಲ್ಲಿ ಪ್ರಾಬಲ್ಯ ಸಾಧಿಸುವುದಕ್ಕೆ ಅಡ್ಡಿಯಾಗಿದೆ.

ಇತ್ತೀಚೆಗೆ ಭಾರತ ಮತ್ತು ಅಮೆರಿಕ ಪರಸ್ಪರ ರಕ್ಷಣಾ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದ ನಂತರ ರಷ್ಯಾ ದೇಶವು ಭಾರತದಿಂದ ದೂರ ಸರಿಯುತ್ತಿದೆ ಎಂಬ ಭಾವನೆಗಳು ಮೂಡಿದ್ದವು. ರಷ್ಯಾ ಪಾಕಿಸ್ತಾನಕ್ಕೆ ತನ್ನ ನೌಕಾಸೌನ್ಯ ಮತ್ತು ಭೂ-ಸೇನೆಯ ತುಕಡಿಗಳನ್ನು ಕಳುಹಿಸಿ ಜಂಟಿ ಸಮರಾಭ್ಯಾಸ ಕೈಗೊಂಡಿತು.

ಪಾಕಿಸ್ತಾನವನ್ನು ಸಾರ್ಕ್ ನಲ್ಲಿ ಯಶಸ್ವಿಯಾಗಿ ಏಕಾಂಗಿಯಾಗಿಸಿದ ಭಾರತಕ್ಕೆ ಚೀನಾ ದೊಡ್ಡ ಸವಾಲಾಗಿ ಪರಿಣಮಿಸಿದೆ. ಮೂರು ಅಣ್ವಸ್ತ್ರ ರಾಷ್ಟ್ರಗಳು ಪರಸ್ಪರ ಯುದ್ಧಕ್ಕಿಳಿದರೆ ಹೆಚ್ಚು ನಷ್ಟವಾಗುವುದು ಭಾರತಕ್ಕೇ. ಆದುದರಿಂದ ಚೀನಾ ಜತೆ ಉತ್ತಮ ಸಂಬಂಧ ಹೊಂದಿರುವ ರಷ್ಯಾ ದೇಶವು ದಕ್ಷಿಣ ಏಷ್ಯಾದ ಸ್ಥಿರತೆ ಕಾಪಾಡುವಲ್ಲಿ ಭಾರತಕ್ಕೆ ಸಹಕಾರಿಯಾಗಬಲ್ಲದು.

ಈ ದೃಷ್ಟಿಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಬ್ರಿಕ್ಸ್ ಸಮಾವೇಶದ ಪೂರ್ವಭಾವಿಯಾಗಿ ಮಾತುಕತೆ ಆರಂಭಿಸಿದ್ದು, ಭಾರತ-ರಷ್ಯಾ ಹಲವು ದ್ವಿಪಕ್ಷೀಯ ರಕ್ಷಣಾ ಒಪ್ಪಂದಗಳಿಗೆ ಸಹಿ ಹಾಕಲಿವೆ.

ಚೀನಾದ ಮನವೊಲಿಸುವಲ್ಲಿ ಪುಟಿನ್ ಅವರ ಪ್ರಭಾವವನ್ನು ಮೋದಿ ಬಳಸಿಕೊಳ್ಳುವರೇ? ಬ್ರಿಕ್ಸ್ ಸಮಾವೇಶದ ಅಂತ್ಯದಲ್ಲಿ ಭಾರತ-ಚೀನಾ ಸಂಬಂಧ ಸುಧಾರಣೆ ದೃಷ್ಟಿಯಿಂದ ಯಾವುದಾದರೂ ಮಹತ್ವದ ನಿರ್ಣಯ ಹೊರಬೀಳುವುದೇ ಎಂಬುದು ವಿಶ್ವಾದ್ಯಂತ ರಾಜತಾಂತ್ರಿಕ ತಜ್ಞರ ಕುತೂಹಲವಾಗಿದೆ.

putin-modi-meet-brics-goa-web

Leave a Reply

comments

Related Articles

error: