ಕರ್ನಾಟಕಪ್ರಮುಖ ಸುದ್ದಿ

ವಾರ್ತಾ ಇಲಾಖೆ ಪುನರ್‍ರಚನೆ ಸಮಿತಿ ವರದಿ ಸಲ್ಲಿಕೆ : ದೆಹಲಿಯಲ್ಲಿ ಮಾಧ್ಯಮ ಕೇಂದ್ರ ಸ್ಥಾಪಿಸಲು ಮನವಿ

ಬೆಂಗಳೂರು, ಜುಲೈ 12 : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಸ್ತುತ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು  ಹಾಗೂ ಯೋಜನೆಗಳ ವಿವರಗಳನ್ನು ಜನರಿಗೆ ಮನದಟ್ಟು ಮಾಡಲು ಅಗತ್ಯವಿರುವ ಸಕಲ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಇಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪುನರ್‍ರಚನೆ ಸಮಿತಿ  ಸಲ್ಲಿಸಿದ ವರದಿಯನ್ನು ಸ್ವೀಕರಿಸಿ ಮಾತನಾಡಿದ ಅವರು ಇತರೆ ರಾಜ್ಯಗಳಿಗೆ ಹೋಲಿಸಿದಲ್ಲಿ ಕರ್ನಾಟಕದಲ್ಲಿ ವಾರ್ತಾ ಇಲಾಖೆಯ ಅನುದಾನ ಕಡಿಮೆ ಇದೆ ಎನ್ನುವ ಮಾಹಿತಿ ತಮಗೆ ತಿಳಿದಿದ್ದು, ಇಲಾಖೆಗೆ ಕಳೆದ ವರ್ಷದಿಂದ ಹೆಚ್ಚಿನ ಅನುದಾನವನ್ನು ನೀಡಲಾಗುತ್ತಿದೆ. ಅಧಿಕಾರಿಗಳು ತಮ್ಮ ಅಗತ್ಯತೆಯ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದಲ್ಲಿ ಮತ್ತಷ್ಟು ಅನುದಾನ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದರು. ಸಮಿತಿ ಸಲ್ಲಿಸಿರುವ ವರದಿಯನ್ನು ಸರ್ಕಾರ ಪರಿಶೀಲಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ತಿಳಿಸಿದರು.

ವರದಿಯನ್ನು ಸಲ್ಲಿಸಿ ಮಾತನಾಡಿದ ಸಮಿತಿಯ ಅಧ್ಯಕ್ಷ ಎಂ.ಆರ್. ಶ್ರೀನಿವಾಸಮೂರ್ತಿ ಅವರು ಸಮಿತಿಯು ಲಭ್ಯ ಮಾನವ ಸಂಪನ್ಮೂಲದಲ್ಲಿ ಇಂದಿನ ತಾಂತ್ರಿಕತೆಯನ್ನು ಬಳಸಿಕೊಂಡು ಅತ್ಯಂತ ಪರಿಣಾಮಕಾರಿಯಾಗಿ ಇಲಾಖೆ ಕಾರ್ಯನಿರ್ವಹಿಸುವ ಬಗ್ಗೆ ಹೆಚ್ಚಿನ ಒತ್ತು ನೀಡಲಾಗಿದೆ. ಈಗಾಗಲೇ ಇಲಾಖೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಅತ್ಯಂತ ಉತ್ತಮ ಸಿಬ್ಬಂದಿಗಳು ಇಲಾಖೆಯಲ್ಲಿದ್ದು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಲಹೆಗಳನ್ನು ನೀಡಲಾಗಿದೆ. ಕೇಂದ್ರ ಸರ್ಕಾರದ ಪಿ.ಐ.ಬಿ. ಮಾದರಿಯಲ್ಲಿ ಸರ್ಕಾರದ ಪ್ರತಿ ಇಲಾಖೆಯ ಕಾರ್ಯಗಳ ಕುರಿತು ಜಿಲ್ಲಾವಾರು ಕಚೇರಿಗಳು ಜಿಲ್ಲಾ ಮಟ್ಟದಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯ ನಡೆಯುವ ಅಗತ್ಯತೆ ಇದೆ. ಪ್ರಸ್ತುತ ಇಲಾಖೆಯು ಮುದ್ರಣ ಮಾಧ್ಯಮದಲ್ಲಿ ಪ್ರಚಾರದ ಹೆಚ್ಚಿನ ಒತ್ತನ್ನು ನೀಡುತ್ತಿದ್ದು,  ಇದನ್ನು ದೂರದರ್ಶನ ವಾಹಿನಿಗಳಿಗು ಮತ್ತು ಹೊಸ ಮಾಧ್ಯಮಗಳಿಗೂ ವಿಸ್ತರಿಸುವ ಅಗತ್ಯವಿದೆ.  ಈ ರೀತಿಯ ಹಲವು ಅಂಶಗಳ ಬಗ್ಗೆ ಸಮಿತಿ ಹೆಚ್ಚಿನ ಒತ್ತನ್ನು ನೀಡಿದ್ದು ವರದಿಯು 120 ಪುಟ ಹಾಗೂ 10 ಅಧ್ಯಾಯಗಳಿಂದ ಕೂಡಿದೆ ಎಂದು ತಿಳಿಸಿದರು.

ದೆಹಲಿಯಲ್ಲಿ ರಾಜ್ಯದ ಪತ್ರಕರ್ತರುಗಳ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದ್ದು ಕನ್ನಡದಲ್ಲಿ ಹೊಸದಾಗಿ ಪ್ರಾರಂಭಗೊಂಡಿರುವ ಮಾಧ್ಯಮ ಸಂಸ್ಥೆಗಳು ತಮ್ಮ ಪ್ರತಿನಿಧಿನಗಳನ್ನು ನೇಮಿಸುತ್ತಿರುವುದು ಪ್ರಮುಖ ಕಾರಣ. ರಾಷ್ಟ್ರಮಟ್ಟದಲ್ಲಿ ರಾಜ್ಯಕ್ಕೆ ಸಂಬಂಧಪಟ್ಟ ಬೆಳವಣಿಗೆಗಳ ಮೇಲೆ ನಿಗಾ ಅನುಕೂಲವಾಗುವಂತೆ ಇಡಲು ದೆಹಲಿಯಲ್ಲಿ ಕರ್ನಾಟಕ ಮಾಧ್ಯಮ ಕೇಂದ್ರ ಸ್ಥಾಪಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪುನರ್‍ರಚನಾ ಸಮಿತಿಯ ಅಧ್ಯಕ್ಷ ಎಂ.ಆರ್. ಶ್ರೀನಿವಾಸಮೂರ್ತಿ ಅವರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.

ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರುಗಳಾದ ಡಾ. ಎಸ್. ಕೃಷ್ಣಮೂರ್ತಿ, ಹಿರಿಯ ಪತ್ರಕರ್ತ  ರಾಜಾ  ಶೈಲೇಶ್‍ಚಂದ್ರ ಗುಪ್ತ, ಪತ್ರಕರ್ತ ಇಸ್ಮಾಯಿಲ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಎಂ. ಲಕ್ಷ್ಮೀನಾರಾಯಣ, ನಿರ್ದೇಶಕ ಎನ್. ಆರ್. ವಿಶುಕುಮಾರ್, ಜಂಟಿ ನಿರ್ದೇಶಕರಾದ ಹೆಚ್. ಬಿ. ದಿನೇಶ್ ಹಾಗೂ ಎ. ಆರ್. ಪ್ರಕಾಶ್ ಅವರು ಉಪಸ್ಥಿತರಿದ್ದರು.

-ಎನ್.ಬಿ.

Leave a Reply

comments

Related Articles

error: