ಮೈಸೂರು

ಪೊಲೀಸ್ ಅಧಿಕಾರಿಯ ಪುತ್ರನಿಂದ ವಂಚನೆ : ದೂರು ದಾಖಲು

ಮೈಸೂರು,ಜು.12:-  ಪೊಲೀಸ್ ಅಧಿಕಾರಿಯ ಪುತ್ರನೋರ್ವ ಟವರ್ ಇನ್ ಸ್ಟಾಲರ್ ಅಳವಡಿಸಿಕೊಡುವುದಾಗಿ ಅಮಾಯಕ ರೈತರನ್ನು ನಂಬಿಸಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಆರೋಪಕ್ಕೆ ಗುರಿಯಾಗಿರುವುದು ಬೆಳಕಿಗೆ ಬಂದಿದೆ.
ವಂಚಿಸಿದಾತನನ್ನು ಮೈಸೂರಿನ ಡಿ.ಎ.ಆರ್ ನಲ್ಲಿ ಆಗಿರುವ ಕೊಟ್ಟೂರಯ್ಯನವರ ಪುತ್ರ ಶಶಿಕಾಂತ್ ಜಿ.ಕೆ ಎಂದು ಗುರುತಿಸಲಾಗಿದೆ. ಈತ  30 ಮಂದಿ ರೈತರಿಗೆ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ. ಪ್ರತಿ ರೈತನಿಂದ ತಲಾ 40 ಸಾವಿರ ರೂಪಾಯಿ ಪಡೆದಿರುವ ಶಶಿಕಾಂತ್  ಒಟ್ಟು 12 ಲಕ್ಷ ರೂಪಾಯಿ ವಂಚನೆ ಮಾಡಿದ್ದಾನೆ ಎನ್ನಲಾಗುತ್ತಿದೆ.  ರೈತರಿಂದ ಹಣಪಡೆದು ಶಶಿಕಾಂತ್ ಗೆ ನೀಡಿದ್ದ ಕೆ.ಪಿ ಯೋಗೇಶ್ ಎಂಬವರು ಮೈಸೂರಿನ ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕೆ.ಪಿ ಯೋಗೇಶ್ ಮಂಡ್ಯ ಜಿಲ್ಲೆಯ ಪಾಂಡವಪುರದ ನಿವಾಸಿಯಾಗಿದ್ದು, ಮೈಸೂರಿನ ನಜರ್ ಬಾದ್ ಠಾಣೆ ಪೊಲೀಸರು
ಈ ಪ್ರಕರಣ ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ಪಾಂಡವಪುರದಲ್ಲೇ ದೂರು ದಾಖಲಿಸಿ ಎಂದು ಹೇಳಿ ಎನ್.ಸಿ.ಆರ್ ಕ್ಲೋಸ್ ಮಾಡಿ ಕೈ ತೊಳೆದುಕೊಂಡಿದ್ದಾರೆ .
ಯೋಗೇಶ್  ಪಾಂಡವಪುರ ತಾಲೂಕಿನ ವಿವಿಧ ಗ್ರಾಮಗಳ ರೈತರಿಂದ ಹಣ ಸಂಗ್ರಹಿಸಿ ಶಶಿಕಾಂತ್ ಗೆ ನೀಡಿದ್ದರು.ಆದರೆ ಹಣ ಪಡೆದಿದ್ದ ಶಶಿಕಾಂತ್ ನಾಪತ್ತೆಯಾದ ಬಳಿಕ ರೈತರು ವಂಚನೆಗೆ ಒಳಗಾಗಿರುವುದನ್ನು ತಿಳಿದು ಕಂಗಾಲಾಗಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ತಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: