ಮೈಸೂರು

ಖಾಲಿಯಿರುವ ಹುದ್ದೆ ಭರ್ತಿ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ

ಮೈಸೂರು, ಜು.೧೩: ತೋಟಗಾರಿಕೆ ಇಲಾಖೆಯಲ್ಲಿ ಖಾಲಿ ಇರುವ ಗಾರ್ಡನರ್ ಹಾಗೂ ಸಹಾಯಕರ ಹುದ್ದೆ ಭರ್ತಿಗೆ ರಾಜ್ಯ ಮತ್ತು ಜಿಲ್ಲಾ ಹಾಪ್‌ಕಾಮ್ಸ್‌ಗಳಲ್ಲಿ ತೋಟಗಾರಿಕೆ ತರಬೇತಿ ಪಡೆದವರನ್ನು ಪರಿಗಣಿಸಬೇಕು, ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಅನುದಾನಿತ ಶಾಲೆ, ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ತೋಟಗಾರಿಕೆ ಶಿಕ್ಷಕರ ಹುದ್ದೆಯನ್ನು ಭರ್ತಿ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ರಾಜ್ಯಮಟ್ಟದ ತೋಟಗಾರಿಕೆ ತರಬೇತುದಾರರ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಗುರುವಾರ ನಗರದ ಕರ್ಜನ್ ಪಾರ್ಕ್‌ನಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ವಿವಿಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಗಾರ್ಡನರ್ ಹಾಗೂ ಸಹಾಯಕರ ಹುದ್ದೆ ಭರ್ತಿ ವೇಳೆ ತರಬೇತಿ ಪಡೆದವರನ್ನು ಪರಿಗಣಿಸಬೇಕು. ಈ ಹುದ್ದೆಗಳನ್ನು ಇಲಾಖೆ ಹಾಗೂ ಸರ್ಕಾರದ ವತಿಯಿಂದ ನೇರ ನೇಮಕಾತಿ ಮಾಡಿಕೊಳ್ಳಬೇಕು. ಎನ್‌ಜಿಓ ಅಥವಾ ಖಾಸಗಿ ಸಂಸ್ಥೆಗಳಿಗೆ ಟೆಂಡರ್ ನೀಡಬಾರದು. ಬ್ಯಾಕ್‌ಲಾಗ್ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಬೇಕು. ಪ್ರಸ್ತುತ ನೀಡಿರುವ ಗಾರ್ಡನರ್ ಹುದ್ದೆಯ ಟೆಂಡರ್ ಹಿಂಪಡೆದು ಇಲಾಖೆಯಿಂದ ಭರ್ತಿ ಮಾಡಬೇಕು. ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಅನುದಾನಿತ ಶಾಲೆ, ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ತೋಟಗಾರಿಕೆ ಶಿಕ್ಷಕರನ್ನು ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು. ಕರ್ಜನ್ ಪಾರ್ಕ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ಸಾಗಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಮೂಗನಹುಂಡಿ ಯೋಗೇಶ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: