ಮೈಸೂರು

ಭಾವಸಾರ ಕ್ಷತ್ರಿಯಾ ಸಮಾಜಕ್ಕೆ ರಾಜಕೀಯ ಮೀಸಲಾತಿ ಹಾಗೂ ಪ್ರತ್ಯೇಕ ನಿಗಮ ಮಂಡಳಿಗೆ ಆಗ್ರಹ

ಮೈಸೂರು,ಜು.13 : ಭಾವಸಾರ ಕ್ಷತ್ರಿಯ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಮುಂದಾಗಿ ಪ್ರತ್ಯೇಕ ನಿಗಮ ಮಂಡಳಿಯನ್ನು ಸ್ಥಾಪಿಸಬೇಕೆಂದು ಅಖಿಲ ಭಾರತ ಭಾವಸಾರ ಕ್ಷತ್ರಿಯ ಮಹಾಸಭಾದ ರಾಜಾಧ್ಯಕ್ಷ ಸುಧೀರ ನವಲೆ ಸಿಎಂ ಸಿದ್ದರಾಮಯ್ಯನವರಿಗೆ ಒತ್ತಾಯಿಸಿದರು.

ರಾಜ್ಯದಲ್ಲಿ ಸುಮಾರು 15 ಲಕ್ಷಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ಭಾವಸಾರ ಕ್ಷತ್ರಿಯ ಸಮಾಜವು ಇಂದಿಗೂ ರಾಜಕೀಯವಾಗಿ ಅಸ್ಪೃಷ್ಯತೆ ಅನುಭವಿಸುತ್ತಿದೆ. ಅಲ್ಲದೇ ಪಕ್ಷಾತೀತವಾಗಿರುವ ನಮ್ಮ ಸಮಾಜಕ್ಕೆ ರಾಜಕೀಯವಾಗಿ ಇದುವರೆಗೂ ಯಾವುದೇ ಮೀಸಲಾತಿ ನೀಡದೆ ಸಂಪೂರ್ಣವಾಗಿ ನಿರ್ಲಕ್ಷ್ಯಿಸಿದೆ ಎಂದು ಖೇಧ ವ್ಯಕ್ತಪಡಿಸಿದ ಅವರು, ಸರ್ಕಾರದ ಗಮನ ಸೆಳೆಯಲು  ಡಿ.23 ಮತ್ತು 24ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿದ್ದು ಅಂದು ಸಮಾಜದ ಬಲ ಪ್ರದರ್ಶನ ನಡೆಸಲಾಗುವುದು ಎಂದು ತಿಳಿಸಿದರು.

ದರ್ಜಿ, ಸಿಂಪಿಗ, ರಂಗಾರಿ ಹೆಸರಿನಲ್ಲಿರುವ ಭಾವಸಾರ ಕ್ಷತ್ರಿಯ ಜಾತಿಗೆ ಮಹಾರಾಷ್ಟ್ರ ಸರ್ಕಾರ ಹಿಂದುಳಿದ ವರ್ಗಕ್ಕೆ ಸೇರಿಸಿ ವಿಶೇಷ ಸವಲತ್ತು ನೀಡಿದೆ, ಆದರೆ ರಾಜ್ಯದಲ್ಲಿ ಕೇವಲ ದೇವರಾಜ ಅರಸು ಹಿಂದುಳಿದ ವರ್ಗಗಳ ಮಂಡಳಿಯಲ್ಲಿ ನಾಮಕಾವಸ್ಥೆಗೆ ಸೇರ್ಪಡಿಸುವ ಮೂಲಕ ಬೇಜವಾಬ್ದಾರಿ ನಡೆ ತೋರಿದ್ದು ನಮ್ಮ ಸಮಾಜಕ್ಕೆ ವಿಶೇಷ ಮೀಸಲಾತಿಯನ್ನು ನೀಡಬೇಕೆಂದು ಆಗ್ರಹಿಸಿದರು.

ಸಮಾಜದ ಅಭಿವೃದ್ದಿಗಾಗಿ ಸಮುದಾಯದ ವಿದ್ಯಾರ್ಥಿಗಳಿಗೆ ಉಚಿತ ಐಎಎಸ್ ಹಾಗೂ ಐಪಿಎಸ್ ತರಬೇತಿ ಅಕಾಡಮೆಯನ್ನು ಆರಂಭಿಸಲಾಗಿದೆ, ಮಹಿಳೆಯರ ಶ್ರೇಯೋಭಿವೃದ್ಧಿಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಯರಾಮ್ ರಾವ್ ಲಾಳಗಿ, ಶಿವಾಜಿರಾವ್, ಸಂತೋಷ ಪತಂಗಿ ಹಾಗೂ ಇತರರು ಸಾಥ್ ನೀಡಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: