ಕರ್ನಾಟಕ

ಆದಾಯಕ್ಕೆ ಅನುಗುಣವಾಗಿ ಮಕ್ಕಳನ್ನು ಪಡೆಯುವ ಬಗ್ಗೆ ಯೋಜನೆ ರೂಪಿಸಿಕೊಳ್ಳಿ : ಟಿ.ಬಿ.ಜಯಚಂದ್ರ

ರಾಜ್ಯ(ತುಮಕೂರು)ಜು.13:- ಯುವ ಜನಾಂಗ ತಮಗೆ ಎಷ್ಟು ಮಕ್ಕಳು ಇದ್ದರೆ ಸುಖೀ ಜೀವನ ಸಾಧ್ಯ ಎಂಬುದನ್ನು ಅರಿತು ತಮ್ಮ ಆದಾಯಕ್ಕೆ ಅನುಗುಣವಾಗಿ ಮಕ್ಕಳನ್ನು ಪಡೆಯುವ ಬಗ್ಗೆ ಯೋಜನೆ ರೂಪಿಸಿಕೊಳ್ಳುವ ಮೂಲಕ ಜೀವನವನ್ನು ನಡೆಸಿದಲ್ಲಿ ತಮಗೂ ಕ್ಷೇಮ ಸಮಾಜಕ್ಕೂ ಕ್ಷೇಮ. ಇದರಿಂದ ದೇಶದ ಆರ್ಥಿಕತೆಯ ಮೇಲೆ ಒಳ್ಳೆಯ ಪರಿಣಾಮ ಬೀರಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಹೇಳಿದರು.
ತುಮಕೂರು ವಿಶ್ವವಿದ್ಯಾಲಯದ ವಿಜ್ಞಾನ ಕಾಲೇಜಿನ ಸರ್.ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು  ವಿಶ್ವವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ  ಮಾತನಾಡಿದರು. ನಮ್ಮಲ್ಲಿರುವ ಸಂಪನ್ಮೂಲಕ್ಕೆ ತಕ್ಕಂತೆ ನಮ್ಮ ಜನಸಂಖ್ಯೆ ಇರಬೇಕು. ಇಂದು ನಮ್ಮ ಭೂಮಿ ವಿಕಾಸವಾಗಿಲ್ಲ. ನಮ್ಮ ಜನಸಂಖ್ಯೆ ದುಪ್ಪಟ್ಟು ವಿಕಾಸವಾಗುತ್ತಿದೆ. ಇದರಿಂದ ವಾಯು ಮಾಲಿನ್ಯ, ಜಲಮಾಲಿನ್ಯ, ಅನಾರೋಗ್ಯ ಸಮಸ್ಯೆಗಳು ಸೇರಿದಂತೆ ನಮ್ಮಲ್ಲಿ ಅನೇಕ ಸಮಸ್ಯೆಗಳು ಹುಟ್ಟಿಕೊಂಡು ನೆಮ್ಮದಿಯಿಲ್ಲದಂತೆ ದೇಶದ ಆರ್ಥಿಕತೆ ಮೇಲೆ ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತಿವೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ. ರಫೀಕ್ಅಹಮದ್ ಮಾತನಾಡಿ, ಭೂಮಿ ಇದ್ದಷ್ಟೆ ಇದೆ. ಜನಸಂಖ್ಯೆ ಹೆಚ್ಚುತ್ತಲೇ ಇದೆ. ಜನಸಂಖ್ಯೆ ಏರಿಕೆ ಎಲ್ಲರಲ್ಲೂ ಆತಂಕ ಮೂಡಿಸುತ್ತಿದೆ. ನಮ್ಮ ಅಭಿವೃದ್ಧಿ ಕಾರ್ಯಗಳು ಹಿಂದೆ ಬಿದ್ದಿವೆ. ಇದರ ಪರಿಣಾಮ ಬಡತನ ಹೆಚ್ಚಾಗುತ್ತಿದೆ. ನಾವು ಒಂದು ಎರಡು ಮಕ್ಕಳ ಸೂತ್ರ ಅನುಸರಿಸುತ್ತೇವೆ ಎಂಬ ಶಪಥ ಮಾಡುವ ಮೂಲಕ ಅನುಷ್ಠಾನ ಮಾಡಬೇಕೆಂದರು.
ಸಮಾರಂಭದಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜಿ. ಶಾಂತರಾಮ್, ಪ್ರಭಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪ್ರಶಾಂತ್, ಜಿಲ್ಲಾ ಶಸ್ತ್ರಚಿಕಿತ್ಸಕ  ಡಾ.ವೀರಭದ್ರಯ್ಯ ಮತ್ತಿತರರು ಉಪಸ್ಥಿತರಿದ್ದರು.    (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: