
ಮೈಸೂರು
ನಾಳೆ ಈಜು ಕೊಳದ ಉದ್ಘಾಟನೆ, ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ
ಮೈಸೂರು, ಜು.14: 2013-14ನೇ ಸಾಲಿನಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ 301 ಕ್ರೀಡಾಪಟುಗಳಿಗೆ ಜು.15ರಂದು ನಗದು ಪುರಸ್ಕಾರ ನೀಡಿ ಗೌರವಿಸಲಿದ್ದು, ಇದೇ ವೇಳೆ ನೂತನವಾಗಿ ನಿರ್ಮಿಸಿರುವ ಈಜುಕೊಳದ ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸುವರು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜಂ ಟಿ ನಿರ್ದೇಶಕ ಕೆ.ಎಲ್.ಸುಭಾಷ್ ಚಂದ್ರ ತಿಳಿಸಿದರು.
ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಂದು ಸಂಜೆ 5ಗಂಟೆಗೆ ಈಜುಕೊಳ ಉದ್ಘಾಟನೆಯೊಂದಿಗೆ ವಿವಿಧ ಟೆನ್ನಿಸ್ ಅಕಾಡೆಮಿ, ಮಹಿಳಾ ಕ್ರೀಡಾನಿಲಯ ಮತ್ತು ಜಿಮ್ನಾಸ್ಟಿಕ್ ಸೆಂಟರ್ ಗಳ ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೆರವೇರಿಸುವರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ,ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಭಾಗವಹಿಸುವರು. ಶಿಕ್ಷಣ ಸಚಿವ ತನ್ವೀರ್ ಸೇಠ್ ಅಧ್ಯಕ್ಷತೆ ವಹಿಸುವರು. ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಕೆ.ಗೋವಿಂದರಾಜು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಸುರೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)